ಹೊಸೂರು: ದೇಶದಲ್ಲಿ ಬಾಲ್ಯವಿವಾಹವ(Child Marriage)ನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿದ್ದರೂ, ಈಗಲೂ ಹಲವು ಪ್ರದೇಶಗಳಲ್ಲಿ ಈ ಪಿಡುಗು ಅವ್ಯಾಹತವಾಗಿ ನಡೆಯುತ್ತಿದೆ. ತಮಿಳುನಾಡಿನ ಹೊಸೂರು(Hosur) ಬಳಿಯ ಗ್ರಾಮವೊಂದರಲ್ಲಿ 14 ವರ್ಷದ ಹುಡುಗಿಗೆ ಬಾಲ್ಯವಿವಾಹ ನಡೆದಿದ್ದು, ಗಂಡನ ಮನೆಗೆ ಹೋಗಲು ಒಪ್ಪದ ಬಾಲಕಿಯನ್ನು ವ್ಯಕ್ತಿಯೊಬ್ಬ ಬಲವಂತವಾಗಿ ಎತ್ತಿಕೊಂಡು ಹೋಗಿರುವ ಘಟನೆ ನಡೆದಿದೆ. ಬಾಲಕಿ ಎಷ್ಟೇ ಕಿರುಚಾಡಿ, ಕೂಗಾಡಿದರೂ ಯಾರೂ ಆಕೆಯ ಸಹಾಯಕ್ಕೆ ಬಂದಿಲ್ಲ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
14 ವರ್ಷದ ಸಂತ್ರಸ್ತೆಯು ಹೊಸೂರು ಬಳಿಯ ತೋಟಮಂಜು ಪರ್ವತ ಪ್ರದೇಶದ ತಿಮ್ಮತ್ತೂರು ಎಂಬ ಸಣ್ಣ ಹಳ್ಳಿಯವಳು. ಸ್ಥಳೀಯ ಶಾಲೆಯಲ್ಲಿ 7 ನೇ ತರಗತಿಯವರೆಗೆ ಓದಿದ ಆಕೆ, ನಂತರ ಮುಂದಕ್ಕೆ ಓದದೇ ಮನೆಯಲ್ಲೇ ಇದ್ದಳು. ಮಾರ್ಚ್ 3 ರಂದು, ಆಕೆಯ ಅಪ್ಪ-ಅಮ್ಮ ಕರ್ನಾಟಕದ ಕಾಲಿಕುಟ್ಟೈನ ಪರ್ವತ ಗ್ರಾಮದ 29 ವರ್ಷದ ಕಾರ್ಮಿಕ ಮಾದೇಶ್ ಎಂಬಾತನಿಗೆ ಈಕೆಯನ್ನು ವಿವಾಹ(wedding) ಮಾಡಿಕೊಟ್ಟಿದ್ದರು. ಆಕೆ ಎಷ್ಟೇ ಒಲ್ಲೆ ಎಂದರೂ ಅದಕ್ಕೆ ಅವರು ಕಿವಿಗೊಡದೇ ಆಕೆಗಿಂತ 15 ವರ್ಷ ಹಿರಿಯ ವ್ಯಕ್ತಿಗೆ ಬಾಲಕಿಯನ್ನು ಮದುವೆ ಮಾಡಿ ಕೊಟ್ಟಿದ್ದರು. ಬೆಂಗಳೂರಿನಲ್ಲಿ ಮದುವೆ ನಡೆದಿತ್ತು.
ಇದಾದ ಬಳಿಕ ಇತ್ತೀಚೆಗೆ ತನ್ನ ಊರಾದ ತಿಮ್ಮತ್ತೂರಿಗೆ ಮರಳಿದ್ದ ಬಾಲಕಿ, ಮದುವೆಯ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿ, ನಾನು ಅತ್ತೆ ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಳು. ಹೆತ್ತವರು, ಸಂಬಂಧಿಕರು ಎಷ್ಟೇ ಒತ್ತಾಯಿಸಿದರೂ ಆಕೆ ಮತ್ತೆ ಪತಿಯ ಮನೆಗೆ ಹೋಗಲು ನಿರಾಕರಿಸಿದಳು.
ಆದರೆ ಅವಳ ಈ ಪ್ರತಿರೋಧಕ್ಕೆ ಎಲ್ಲರೂ ಕಿವುಡಾಗಿದ್ದರು. ಇದರ ಬೆನ್ನಲ್ಲೇ ಮಾದೇಶ ಮತ್ತು ಆತನ ಅಣ್ಣ ಮಲ್ಲೇಶ್ (38) ಬಂದು, ಬಾಲಕಿಯನ್ನು ಬಲವಂತವಾಗಿ ಕಾಳಿಕುಟ್ಟೈ(Kalikuttai) ಗ್ರಾಮಕ್ಕೆ ಹೊತ್ತೊಯ್ದಿದ್ದಾರೆ. ಆಕೆಯನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದು, ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ, ಅದೀಗ ವೈರಲ್ ಆಗಿದೆ.
ಡೆಂಕಣಿಕೊಟ್ಟೈನ ಮಹಿಳಾ ಪೊಲೀಸ್ ಠಾಣೆ ಈ ಬಗ್ಗೆ ತನಿಖೆ ಆರಂಭಿಸಿದೆ. ಬಾಲಕಿಯ ಅಜ್ಜಿಯು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
ಮಾದೇಶ್, ಆತನ ಸಹೋದರ ಮಲ್ಲೇಶ್ ಹಾಗೂ ಬಾಲಕಿಯ ತಾಯಿ ನಾಗಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಬಾಲಕಿಯ ತಂದೆ ಮತ್ತು ಮಲ್ಲೇಶ್ ಪತ್ನಿಯನ್ನೂ ಬಂಧಿಸಲಾಗಿತ್ತು.
ಎಲ್ಲ ಆರೋಪಿಗಳ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಮತ್ತು ಬಾಲ್ಯ ವಿವಾಹ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರೆಲ್ಲರಿಗೂ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಸಾಧ್ಯತೆಯಿದೆ.
ಹುಡುಗಿ ಈಗ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಾಳೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ವಿವಾಹವು ಕಾನೂನುಬಾಹಿರ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿಯೂ, ಬಾಲ್ಯ ವಿವಾಹವು ದೇಶಾದ್ಯಂತ, ವಿಶೇಷವಾಗಿ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ ಮತ್ತು ಆಂಧ್ರಪ್ರದೇಶದಲ್ಲಿ ಇನ್ನೂ ವ್ಯಾಪಕವಾಗಿದೆ.
2023-2024ರಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 180 ಬಾಲ್ಯ ವಿವಾಹಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಇಂತಹ 105 ಮದುವೆಗಳನ್ನು ತಡೆಯಲಾಗಿದ್ದು, ಉಳಿದ 75 ಪ್ರಕರಣಗಳಲ್ಲಿ ಪೊಲೀಸ್ ಕೇಸು ದಾಖಲಾಗಿದೆ.