ಕೋಲ್ಕತಾ: ಕೇಂದ್ರ ಕೋಲ್ಕತಾದ ಮೆಚುವಾಪಟ್ಟಿ ಪ್ರದೇಶದ ಹೋಟೆಲ್ವೊಂದರಲ್ಲಿ ಮಂಗಳವಾರ ರಾತ್ರಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 14 ಜನರು ಸಾವಿಗೀಡಾಗಿದ್ದಾರೆ. ಮಂಗಳವಾರ ರಾತ್ರಿ 8:15ರ ಸುಮಾರಿಗೆ ಈ ಘಟನೆ ನಡೆದಿದೆ.
ಬೆಂಕಿ ಅವಘಡ ಸಂಭವಿಸಿದ ಕೂಡಲೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಕಟ್ಟಡದ ಕಿಟಕಿಗಳು ಮತ್ತು ಕಿರಿದಾದ ಅಂಚುಗಳ ಮೂಲಕ ಹಲವರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ನಾಲ್ಕನೇ ಮಹಡಿಯಿಂದ ಜಿಗಿಯಲು ಪ್ರಯತ್ನಿಸಿದ ಇಬ್ಬರು ಗಾಯಗೊಂಡಿದ್ದಾರೆ.
“ಒಟ್ಟು 14 ಮಂದಿ ಮೃತದೇಹಗಳು ಪತ್ತೆಯಾಗಿದ್ದು, ಹಲವರನ್ನು ರಕ್ಷಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಸ್ತುತ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಕೋಲ್ಕತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ಹೇಳಿದ್ದಾರೆ.
ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ವಿಧಿವಿಜ್ಞಾನ ತಂಡವೂ ಸದ್ಯದಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ.

ಈ ಬೆಂಕಿ ಅವಘಡಕ್ಕೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೊದಲಿಗೆ ಅಡುಗೆಮನೆಯಿಂದ ಬೆಂಕಿ ಪ್ರಾರಂಭವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಆದರೆ ವಿಧಿವಿಜ್ಞಾನ ತಂಡವು ಆಗಮಿಸಿದ ಬಳಿಕವಷ್ಟೇ ನಿಖರವಾದ ಕಾರಣ ತಿಳಿದುಬರಲಿದೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾತ್ರಿಯಿಡೀ ರಕ್ಷಣಾ ಮತ್ತು ಅಗ್ನಿಶಾಮಕ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ ಮತ್ತು ಈ ಪ್ರದೇಶದಲ್ಲಿ ಗರಿಷ್ಠ ಅಗ್ನಿಶಾಮಕ ದಳದ ಸೇವೆಗಳನ್ನು ಸಜ್ಜುಗೊಳಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ಮೃತರ ಕುಟುಂಬಗಳಿಗೆ ಧೈರ್ಯ ತುಂಬಿದ್ದು, ಸಂತಾಪಗಳನ್ನು ತಿಳಿಸಿದ್ದಾರೆ.
ಪ್ರಧಾನಿ ಮೋದಿಯಿಂದ ಪರಿಹಾರ ಘೋಷಣೆ
ಕೋಲ್ಕತಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಆಗಿರುವ ಪ್ರಾಣಹಾನಿ ಕುರಿತು ಪ್ರಧಾನಿ ಕಾರ್ಯಾಲಯವೂ ಪ್ರತಿಕ್ರಿಯಿಸಿದ್ದು, ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದೆ. ಮೃತರ ಕುಟುಂಬಗಳಿಗೆ ಪಿಎಂಎನ್ಆರ್ಎಫ್ನಿಂದ ತಲಾ 2 ಲಕ್ಷ ರೂ ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರವನ್ನೂ ಘೋಷಿಸಿದೆ.