ಚೀನಾ: ಹೆರಿಗೆ ನೋವು(Labor pain) ಎನ್ನುವುದು ನೋವಿನಲ್ಲೂ ತಾಯಿ ಅನುಭವಿಸುವ ನೆಮ್ಮದಿಯ ಕ್ಷಣ. ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಆಸ್ಪತ್ರೆಗೆ ತೆರಳುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ 13 ವರ್ಷದ ಅಪ್ರಾಪ್ತ ಮಗನೇ ತಾಯಿಯ ಹೆರಿಗೆ ಮಾಡಿಸಿದ್ದಾನೆ.
ಬಾಲಕ ತನ್ನ ತಾಯಿಯ ಹೆರಿಗೆಯನ್ನು ಮಾಡಿಸಿರುವ ಈ ಘಟನೆ ಚೀನಾದಲ್ಲಿ ವರದಿಯಾಗಿದೆ. ತಾಯಿಗೆ ಹೆರಿಗೆ ಕಾಣಿಸುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಿದ ಬಾಲಕ, ಅವರ ನಿರ್ದೇಶನದಂತೆ ಮಗುವಿಗೆ ಜನ್ಮ ನೀಡಲು ನೆರವಾಗಿದ್ದಾನೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಈ ಕುರಿತು ವರದಿ ಮಾಡಿದೆ.
ತಾಯಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಚೀನಾದ ಫುಜಿಯಾನ್ ಪ್ರಾಂತ್ಯದ 13 ವರ್ಷದ ಬಾಲಕ ತುರ್ತು ಕೇಂದ್ರಕ್ಕೆ ಕರೆ ಮಾಡಿ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದಾನೆ. ಆಗ ವೈದ್ಯರು ಕೆಲವು ಮಾರ್ಗದರ್ಶನ ನೀಡುವ ಮೂಲಕ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.
ಆಂಬುಲೆನ್ಸ್ ಮನೆಗೆ ಬರುವವರೆಗೂ ಫೋನ್ ಮೂಲಕವೇ ವೈದ್ಯರು ಹುಡುಗನಿಗೆ ಸೂಚನೆ ನೀಡಿದ್ದಾರೆ. ಆ ಸಲಹೆಗಳನ್ನು ಬಾಲಕ ಪಾಲಿಸಿದ್ದಾನೆ. ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು? ಅವರನ್ನು ಶಾಂತಗೊಳಿಸುವುದು ಹೇಗೆ? ಮಗು ಜನನಕ್ಕೆ ಯಾವ ರೀತಿಯ ಸಹಾಯ ಮಾಡಬೇಕು ಎಂಬೆಲ್ಲ ಮಾಹಿತಿಯನ್ನು ವೈದ್ಯರಿಂದ ಪಡೆದು ಅದೇ ರೀತಿ ಬಾಲಕ ಕಾರ್ಯ ನಿರ್ವಹಿಸಿದ್ದಾನೆ. ಹೊಕ್ಕುಳ ಬಳ್ಳಿ ಬಿಗಿಗೊಳಿಸುವ ಸಮಯ ಬಂದಾಗ ಸ್ವಚ್ಛವಾದ ದಾರ ಸಿಗದಿದ್ದಾಗ. ವೈದ್ಯರು ಮಾಸ್ಕ್ ಸ್ಟ್ರಾಪ್ ಬಳಸಲು ಸಲಹೆ ನೀಡಿದ್ದಾರೆ. ಸೋಂಕು ಮತ್ತು ರಕ್ತಸ್ರಾವವನ್ನು ತಡೆಯಲು ಸೂಚನೆ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ, ವೈದ್ಯಕೀಯ ಸಿಬಂದಿ ಮನೆಗೆ ಬಂದು ತಾಯಿ ಮತ್ತು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಅಪ್ರಾಪ್ತ ಬಾಲಕನ ಸಾಹಸ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.