ಮುಂಬಯಿ: 11ನೇ ಆವೃತ್ತಿಯ ಪ್ರೊ. ಕಬಡ್ಡಿ ಲೀಗ್ ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ಎಲ್ಲ ತಂಡಗಳು ತಯಾರಿ ನಡೆಸುತ್ತಿವೆ.
ಟೂರ್ನಿಯ ಆಯೋಜಕ ಮಶಾಲ್ ಸ್ಪೋಟ್ಸ್ ಸಂಸ್ಥೆ ಈ ಕುರಿತು ಮಂಗಳವಾರ ಸಮಯ ಫಿಕ್ಸ್ ಮಾಡಿ, ಪ್ರಕಟಿಸಿದೆ. ಪ್ರೊ. ಕಬಡ್ಡಿ ಲೀಗ್ 11ನೇ ಆವೃತ್ತಿಗೆ ಅಕ್ಟೋಬರ್ 18ರಂದು ಚಾಲನೆ ದೊರೆಯಲಿದೆ. ಯಶಸ್ವಿ 10 ಆವೃತ್ತಿಗಳನ್ನು ಪೂರೈಸಿರುವ ಪ್ರೊ. ಕಬಡ್ಡಿ ಈ ಬಾರಿ ಲೀಗ್ ಕ್ಯಾರವಾನ್ ಮಾದರಿಯಲ್ಲಿ 3 ನಗರಗಳಲ್ಲಿ ಮಾತ್ರ ನಡೆಯಲಿದೆ.
ಹೈದರಾಬಾದ್ ನಲ್ಲಿ ಮೊದಲ ಚರಣ ಆರಂಭವಾಗಲಿದ್ದು, ನಂತರ ನವೆಂಬರ್ 10ರಿಂದ ನೋಯ್ಡ ಹಾಗೂ ಡಿಸೆಂಬರ್ 3 ರಂದು ಪುಣೆಯಲ್ಲಿ ನಡೆಯಲಿದೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಶೀಘ್ರದಲ್ಲಿಯೇ ಪ್ರಕಟವಾಗಲಿದ್ದು, ಆಗಸ್ಟ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 8 ಆಟಗಾರರು ಒಂದು ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ. ಪುಣೇರಿ ಪಲ್ಟಾನ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ. ಕಳೆದ ಆವೃತ್ತಿಗೆ 12 ನಗರಗಳು ಆತಿಥ್ಯ ವಹಿಸಿದ್ದವು. ಈ ಬಾರಿಯ ಆವೃತ್ತಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.