‘ಬಿಇಎಲ್’ ದಕ್ಷಿಣ ಕನ್ನಡಿಗರ ಸಂಘ ಹಾಗೂ ಮಲೆನಾಡು ಯಕ್ಷಾಭಿಮಾನಿ ಬಳಗವು, ಗುರುವಾರ(16) ಸಂಜೆ ಬೆಂಗಳೂರಿನ ಯಕ್ಷಾಭಿಮಾನಿಗಳಿಗಾಗಿ ಅಪರೂಪದ ಯಕ್ಷಗಾನ ಹಮ್ಮಿಕೊಂಡು ಯಶಸ್ವಿಯಾಯಿತು. ಶ್ರೀ ಕೋದಂಡ ರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದವರಿಂದ “ಶುಕ್ರನಂದನೆ” ಪ್ರಸಂಗದ “ಯಶಸ್ವಿ ನೂರನೆ”ಯ ಪ್ರಯೋಗವನ್ನು “ಭಾರತದ ಹೆಮ್ಮೆಯ ಸಂಸ್ಥೆ “ಬಿಇಎಲ್” ಆವರಣದಲ್ಲಿ ನಡೆಸಿ ಸಂಭ್ರಮಿಸಿತು.

ಜಾಲಹಳ್ಳಿಯ “ಬಿಇಎಲ್” ನ “ರಾಷ್ಟ್ರ ಕವಿ ಕುವೆಂಪು ಕಲಾಕ್ಷೇತ್ರದಲ್ಲಿ ನೂರಾರು ಯಕ್ಷ ಪ್ರೇಮಿಗಳು ಈ ಸಂಭ್ರಮದಲ್ಲಿ ಮಿಂದೆದ್ದರು. ಯಕ್ಷಲೋಕದಲ್ಲಿ ಸುಶ್ರಾವ್ಯ ಕಂಠದಿಂದ ನಲವತ್ತಾರು ವರ್ಷದ ಸುದೀರ್ಘ ಸೇವೆ ಸಲ್ಲಿಸಿ ಮರೆಯಾದ, “ಹೊಸತನದ ರೂವಾರಿ ಎನಿಸಿದ್ದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ”ರಿಗೆ, ಈ “ಶುಕ್ರನಂದನೆಯ ನೂರರ ಸಂಭ್ರಮ” ಅರ್ಪಿಸಿದ್ದು ಅರ್ಥಪೂರ್ಣವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ. ಸುರೇಂದ್ರ ಕುಮಾರ್ ರವರು, ” ಯಕ್ಷಗಾನವು ಬೆಂಗಳೂರಿನ ಈ ‘ಬಿಇಎಲ್’ನಲ್ಲಿ ನಡೆಯುತ್ತಿರುವುದು ಖುಷಿಯಾಗುತ್ತಿದೆ. ಭಾರತದ ಭದ್ರತೆ,ಸುರಕ್ಷತೆಯ ವಿಚಾರದಲ್ಲಿ “ಬಿಇಎಲ್ ಸಂಸ್ಥೆ” ಪಾತ್ರ ಬಹುದೊಡ್ಡದಿದೆ. ಬಿಇಎಲ್ ನಮ್ಮ ನಾಡಿನ ಹೆಮ್ಮೆಯ ಸಂಸ್ಥೆ.” ಎಂದರು.

ಇನ್ನು ಇದೇ ವೇಳೆ ಉಪಸ್ಥಿತರಿದ್ದ ಶ್ರೀ ಮದೆಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಆಶೀರ್ವಚಿಸಿ,” ಕಲೆ ಪ್ರಕಾರಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತಾ ಉಳಿಸುತ್ತವೆ. ಸಮಾಜದಲ್ಲಿ ಇತಿಹಾಸ, ಪುರಾಣವನ್ನು ತಿಳಿಸುವ ಮಾಧ್ಯಮವಾಗಿ ಯಕ್ಷಗಾನ ಪ್ರಮುಖವಾಗಿ ಕಾರ್ಯನಿರ್ವಸುತ್ತದೆ. ಇನ್ನು ಪೌರಾಣಿಕ ಪ್ರಸಂಗಗಳನ್ನೇ ಹೆಚ್ಚಾಗಿ ಪ್ರದರ್ಶಿಸುವ ಹನುಮಗಿರಿ ಮೇಳವು ಯಕ್ಷಗಾನದ ಅಂತ:ಸತ್ವವನ್ನು, ವಾಣಿಜ್ಯ ಉದ್ದೇಶವಿಲ್ಲದೇ ಸಾರುತ್ತಿರುವುದು ಅಭಿನಂದನಾರ್ಹ” ಎಂದರು.
ಯಕ್ಷಗಾನ ಮನೋವಿಕಾಸಕ್ಕೆ ಸಹಾಯ ಮಾಡುತ್ತದೆ. ಧಾರ್ಮಿಕ ವಿಚಾರಗಳನ್ನು ಜನರಿಗೆ ತಲುಪಿಸುವ ಅದ್ಭುತ ಮಾಧ್ಯಮ. ನಮ್ಮ ಕರಾವಳಿ, ಮಲೆನಾಡ ಜನರ ಧರ್ಮ ಸಂಬಂಧಿತ ಜ್ಞಾನಕ್ಕೆ ಈ ಯಕ್ಷಗಾನ ಬಹುಮುಖ್ಯ ಕಾರಣ” ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ, ಧಾರ್ಮಿಕ ಚಿಂತಕರು, ಗಾಯಕರು ವಿದ್ಯಾಭೂಷಣ್ ಸ್ವಾಮಿಗಳು, ಯಕ್ಷಗಾನದ ಪ್ರಭಾವದ ಬಗ್ಗೆ ತಿಳಿಹೇಳಿದರು.

ಇನ್ನು ಬಿಇಎಲ್ ದಕ್ಷಿಣಕನ್ನಡಿಗರ ಸಂಘದ ಅಧ್ಯಕ್ಷರಾದ ಮೋಹನ್ ಕರ್ಣಿಕ್ ಮಾತನಾಡಿ,” ಈ ಮೊಬೈಲ್,ಟಿವಿ ಯುಗದಲ್ಲೂ ಪೌರಾಣಿಕ ಪ್ರಸಂಗವೊಂದು, ನೂರು ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಶ್ಲಾಘನೀಯ. ಆ ನೂರನೆಯ ಪ್ರಯೋಗ ನಮ್ಮ ಬಿಇಎಲ್ ನಲ್ಲಿ ನಡೆಯುತ್ತಿರುವುದು ನಮ್ಮ ಹೆಮ್ಮೆ” ಎಂದರು.
1969ರಲ್ಲಿ ಕರಾವಳಿ ಭಾಗದ ಬಿಇಎಲ್ ನೌಕರರು ಸೇರಿ ಸ್ಥಾಪಿಸಿದ “ಬಿಇಎಲ್ ದಕ್ಷಿಣ ಕನ್ನಡಿಗರ ಸಂಘ”ವು ಸತತ ವಿಶೇಷವಾದ ಕಾರ್ಯ ಮಾಡುತ್ತಲೇ ಬಂದಿದ್ದು, ಸದಾ ಕ್ರಿಯಾಶೀಲವಾಗಿರುತ್ತದೆ. ಕರಾವಳಿಯ ಸೊಗಡನ್ನು ಸದಾ ತೆರೆದಿಡುವ ಈ ಸಂಘ ವು ಈ ಬಾರಿ, ಹನುಮಗಿರಿ ಮೇಳದ “ಶುಕ್ರನಂದನೆ” ಯ ನೂರನೆಯ ಪ್ರಯೋಗವನ್ನು ಮಲೆನಾಡು ಯಕ್ಷಾಭಿಮಾನಿ ಬಳಗ ಬೆಂಗಳೂರು ಇವರ ಸಹಯೋಗದೊಂದಿಗೆ ನೆರವೇರಿಸಿ, ಅಭೂತಪೂರ್ವ ಯಶಸ್ಸು ಕಂಡಿತು.
ಹಾಗೆಯೇ ನೂರನೆಯ ಪ್ರಯೋಗದ ಸಂಭ್ರಮದಲ್ಲಿ ತುಸು ಹೆಚ್ಚೇ ಉತ್ಸಾಹದಲ್ಲಿದ್ದ ಹನುಮಗಿರಿ ಮೇಳದ ಹಿಮ್ಮೇಳ-ಮುಮ್ಮೇಳದವರು ಅದ್ಭುತವಾಗಿ ತೊಡಗಿಸಿಕೊಂಡು, ಪ್ರಸಂಗದ ನೂರರ ಸಂಭ್ರಮವನ್ನು ನೂರ್ಮಡಿಗೊಳಿಸಿದರು. ಒಟ್ಟಿನಲ್ಲಿ ಅಪರೂಪದ ಯಕ್ಷಗಾನವು ಅದ್ಭುತವಾಗಿ ಮೂಡಿಬಂದು, ಕಲಾಭಿಮಾನಿಗಳ ಮನಸೋರೆಗೊಂಡಿತು.
