ಬೆಂಗಳೂರು ಗ್ರಾಮಾಂತರ: ಹೋಳಿ ಆಡಿದ ನಂತರ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮ್ಯಾನೇಜರ್ ಸುನೀಲ್ ಹಾಗೂ ಬಿಹಾರ ಮೂಲದ ಕಾರ್ಮಿಕರು ಹೋಳಿ ಆಡಿದ್ದರು. ನಂತರ ತೋಟದ ಮ್ಯಾನೇಜರ್ ಸುನೀಲ್ ಮನೆಯತ್ತ ತೆರಳುವುದಾಗಿ ಹೇಳಿ, ಮನೆಗೆ ಹೋಗಿರಲಿಲ್ಲ. ಇತ್ತ ಕುಟುಂಬಸ್ಥರು ಹುಡುಕಾಟ ನಡೆಸಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಆದರೆ, ಕೃಷಿ ಹೊಂಡದ ದಡದ ಮೇಲೆ ಯುವಕನ ಬಟ್ಟೆ ಚಪ್ಪಲಿ ಕಾಣಿಸಿದ್ದು, ಅನುಮಾನದ ಮೇಲೆ ಕೃಷಿ ಹೊಂಡದಲ್ಲಿ ಹುಡುಕಾಟ ನಡೆಸಲಾಗಿದೆ. ಈ ಸಂದರ್ಭದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಆತನ ಮುಖದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಇದು ಆಕಸ್ಮಿಕವಲ್ಲ, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ನೀರಿಗೆ ಎಸೆದಿರಬೇಕೆಂದು ಶಂಕಿಸಲಾಗಿದೆ.
ಈ ಹಿಂದೆ ಕೆಲಸ ಮಾಡ್ತಿದ್ದ ಮ್ಯಾನೇಜರ್ ಅಥವಾ ಬಿಹಾರ ಮೂಲದ ಕೂಲಿ ಕಾರ್ಮಿಕರು ಕೊಲೆ ಮಾಡಿರುವ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.