ನವದೆಹಲಿಯಲ್ಲಿ ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆ ವಿಚಾರ ಸಂಕಿರಣವೊಂದನ್ನು ಆಯೋಜಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ರು. ವೇದಿಕೆ ಮೇಲೆ ಕುಳಿತ ಅಮಿತ್ ಶಾ, ಇತ್ತೀಚಿನ ಸಿಎಎ ಕಾನೂನು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತಾಡ್ತಾ ಇದ್ರು. ಆಗ ಎಲೆಕ್ಟೋರಲ್ ಬಾಂಡುಗಳ ಕುರಿತು ಪ್ರತಿಪಕ್ಷಗಳ ಆರೋಪದ ಬಗ್ಗೆ ಆಂಕರ್ ಅಮಿತ್ ಶಾ ಅವರನ್ನು ಪ್ರಶ್ನಿಸಿದ್ರು. ಎಲೆಕ್ಟೋರಲ್ ಬಾಂಡ್ ರೂಪದಲ್ಲಿ ಹಣ ಪಡೆಯಲು ಸರ್ಕಾರ ಸಿಬಿಐ, ಇಡಿ ಮೂಲಕ ಕಾರ್ಪೋರೇಟ್ ಸಂಸ್ಥೆಗಳನ್ನು ಸುಲಿಗೆ ಮಾಡ್ತಾ ಇದ್ಯಾ ಅನ್ನೋದು ಆ ಪ್ರಶ್ನೆ. ಈ ಪ್ರಶ್ನೆ ಕೇಳುತ್ತಲೇ ಅಮಿತ್ ಶಾ ಕೆಂಡಾಮಂಡಲರಾದರು.
ಅಮಿತ್ ಶಾ ಇಷ್ಟಕ್ಕೇ ನಿಲ್ಲಲಿಲ್ಲ. ಎಲೆಕ್ಟೋರಲ್ ಬಾಂಡ್ ಯೋಜನೆಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿದ್ದು ಯಾಕೆ ಅಂತ ಅಮಿತ್ ಶಾ ವಿವರಿಸಿದರು. ನಾನು ದೇಶವಾಸಿಗಳನ್ನು ಕೇಳಲು ಇಚ್ಛಿಸುತ್ತೇನೆ. ಎಲೆಕ್ಟೋರಲ್ ಬಾಂಡ್ ಬರೋದಕ್ಕೆ ಮುನ್ನ ರಾಜಕೀಯ ಪಕ್ಷಗಳು ಚುನಾವಣೆಗೆ ಎಲ್ಲಿಂದ ಹಣ ಪಡೀತಾ ಇದ್ರು? ಅವು ಬ್ಲ್ಯಾಕ್ ಮನೀನಾ? ವೈಟ್ ಮನೀನಾ? ಈಗ ಕಂಪನಿಗಳ ಬ್ಯಾಲೆನ್ಸ್ ಶೀಟಲ್ಲಿ ದೇಣಿಗೆ ನಮೂದಾಗುತ್ತೆ. ಇದು ಅಕೌಂಟೆಡ್ ಮನಿದೇಣಿಗೆದಾರರಿಗೆ ಕಿರುಕುಳ ತಪ್ಪಿಸಲು ಇದನ್ನು ಗೌಪ್ಯವಾಗಿ ಇಡಲು ನಿರ್ಧರಿಸಲಾಯ್ತು. ಆದ್ರೂ, ಕಂಪನಿಗಳ ಬ್ಯಾಲೆನ್ಸ್ ಶೀಟಲ್ಲೇ ಈ ದೇಣಿಗೆ ನಮೂದಾಗುವುದರಿಂದ, ಇಲ್ಲಿ ಗೌಪ್ಯತೆ ಪ್ರಶ್ನೆ ಇಲ್ಲವೇ ಇಲ್ಲ. ಹಿಂದೆ ಎಲ್ಲವೂ ನಗದು ರೂಪದಲ್ಲಿ ನಡೆಯುತ್ತಿತ್ತು. ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿತ್ತು.
ಎಲೆಕ್ಟೋರಲ್ ಬಾಂಡ್ ಬರುವುದಕ್ಕೂ ಮುನ್ನ ಯಾವ ರೀತಿ ಭ್ರಷ್ಟಾಚಾರ ನಡೀತಿತ್ತು ಅನ್ನೋದನ್ನು ಅಮಿತ್ ಶಾ ವ್ಯಂಗ್ಯವಾಗಿ ವಿವರಿಸಿದ್ರು. ರಾಜಕೀಯ ಪಕ್ಷಗಳ ಬದಲಿಗೆ ನಾಯಕರ ಜೇಬಿಗೆ ಹಣ ಹೋಗುವುದನ್ನು ಎಲೆಕ್ಟೋರಲ್ ಬಾಂಡುಗಳು ತಪ್ಪಿಸಿವೆ ಎಂದು ಪ್ರತಿಪಾದಿಸಿದ್ರು.
ಆಗ 1100 ರೂ ದೇಣಿಗೆ ಬಂದರೆ, 100 ರೂ ಪಕ್ಷಕ್ಕೆ ಹೋಗುತ್ತಿತ್ತು. 1000 ರೂ ಇವರ ನಾಯಕರ ಜೇಬಿಗೆ ಹೋಗ್ತಾ ಇತ್ತು. ಈಗ ಎಲೆಕ್ಟೋರಲ್ ಬಾಂಡ್ ಇದಕ್ಕೆ ಅವಕಾಶ ನೀಡೋದಿಲ್ಲ.
ಹೀಗೆ ಅಮಿತ್ ಶಾ ಎಲೆಕ್ಟೋರಲ್ ಬಾಂಡ್ ಯಾಕೆ ತರಬೇಕಾಯ್ತು ಅನ್ನೋದನ್ನು ಎಳೆ ಎಳೆಯಾಗಿ ಬಿಡಿಸಿಟ್ರು. ಎಲೆಕ್ಟೋರಲ್ ಬಾಂಡ್ ಯೋಜನೆ ರದ್ದಾದರೆ, ರಾಜಕೀಯದಲ್ಲಿ ಮತ್ತೆ ಕಪ್ಪು ಹಣದ ಹಾವಳಿ ಹೆಚ್ಚಾಗಲಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.