ಬೆಂಗಳೂರು: ರಾಜ್ಯದ ಜನರು ಬಿರು ಬೇಸಿಗೆಗೆ ಕಂಗಾಲಾಗಿದ್ದರು. ಆದರೆ, ಇಂದು ಹಲವು ಜಿಲ್ಲೆಗಳಲ್ಲಿ ಮಳೆರಾಯ ತಂಪೆರೆದಿದ್ದಾನೆ.
ಮಲೆನಾಡಿನ ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು ಉತ್ತರ ಒಳನಾಡಿನ ವಿಜಯಪುರ ಸೇರಿದಂತೆ ಕಲಬುರಗಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಹೀಗಾಗಿ ಬಿಸಿಲಿನ ತಾಪಕ್ಕೆ ತತ್ತರಿಸಿದವರು ನೆಮ್ಮದಿ ಬಿಡುವಂತಾಗಿದೆ. ಹಲವೆಡೆ ಹಗುರವಾದ ಮಳೆಯಾಗಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಕೊಡಗು ಜಿಲ್ಲೆಯ ಕೆಲವೆಡೆ ಹಗುರವಾದ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಕಾಫಿ ಬೆಳೆಗಾರರು ಸಂಭ್ರಮ ಪಡುವಂತಾಗಿದೆ. ವಿಜಯಪುರ ನಗರ, ತಿಕೋಟ ತಾಲೂಕಿನ ಘೋಣಸಗಿ, ಬಾಬಾನಗರ, ಹುಬನೂರು, ಸೋಮದೇವರಹಟ್ಟಿ, ಬಿಜ್ಜರಗಿ ಸೇರಿದಂತೆ ಹಲವೆಡೆ ಮಲೆಯಾಗಿದೆ. ಹಲವೆಡೆ ಮತ್ತೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.