ಭಾರತ ಎಲ್ಲ ರಂಗದಲ್ಲಿಯೂ ಪ್ರಭಲವಾಗುತ್ತಿರುವುದನ್ನು ಪಕ್ಕದ ಚೀನಾಕ್ಕೆ ತಡೆದುಕೊಳ್ಳಲಾಗುತ್ತಿಲ್ಲ. ಆಗಾಗ ಏನಾದರೊಂದು ಕಿತಾಪತಿ ಮಾಡುತ್ತಿರುವುದೇ ಇದಕ್ಕೆ ಕಾರಣ. ಗಡಿಯಲ್ಲಿ ಕಾಲು ಕೆದರಿ ಜಗಳ ತೆಗೆಯುತ್ತಿದ್ದ ಚೀನಾ ಈಗ ತಂತ್ರಜ್ಞಾನದ ಭಯೋತ್ಪಾದಕತೆಗೆ ಕೈ ಹಾಕಿದೆ.
ಭಾರತದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಮೊದಲ ಹಂತದ ಮತದಾನಕ್ಕೆ ಹಲವು ರಾಜ್ಯಗಳಲ್ಲಿ ತಯಾರಿ ನಡೆದಿದೆ. ಇಡೀ ಭಾರತವೇ ಚುನಾವಣಾ ಹಬ್ಬದಲ್ಲಿದ್ದ ಈ ಸಂದರ್ಭದಲ್ಲಿ ಕೃತಕ ಬುದ್ದಿಮತ್ತೆ ಬಳಸಿ, ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಹೊಂಚು ಹಾಕಿದೆ. ಅದರಲ್ಲಿಯೂ ತನಗೆ ಉಪಯೋಗವಾಗುವ ನಿಟ್ಟಿನಲ್ಲಿ ಹಲವು ಹೇಳಿಕೆ, ನಿರ್ಧಾರಗಳನ್ನು ತಿರುಚಿ, ನಾಯಕರ ಕಿತ್ತಾಟಕ್ಕೆ ಹೆಚ್ಚಿನ ವೇದಿಕೆ ಕಲ್ಪಿಸುವ ಸಂಚು ರೂಪಿಸಿದೆ. ಚೀನಾದ ಈ ಕುತಂತ್ರವನ್ನು ಜಾಗತಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆ ಬಹಿರಂಗಪಡಿಸಿದೆ.
ಇತ್ತೀಚೆಗಷ್ಟೇ ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾದ ಎಐ ರಚಿತ ವಿಷಯಗಳು ಅಲ್ಲಿನ ಚುನಾವಣೆ ಮೇಲೆ ಪ್ರಭಾವ ಬೀರಿದ್ದವು. ಹೀಗೆ ಜನರ ಅಭಿಪ್ರಾಯವನ್ನು ಬದಲಾಯಿಸಲು ಚೀನಾ ಎಐ ರಚಿತ ವಿಡಿಯೋ, ಫೋಟೋಗಳನ್ನು ಬಳಸಿಕೊಳ್ಳಬಹುದು ಎಂದು ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ.
ಮೈಕ್ರೋಸಾಫ್ಟ್ ಥ್ರೆಟ್ ಇಂಟೆಲಿಜೆನ್ಸ್‌ನ ವಿಶ್ಲೇಷಣೆಯಂತೆ, ಉತ್ತರ ಕೊರಿಯಾದ ಬೆಂಬಲದೊಂದಿಗೆ ಚೀನಾ ಸರ್ಕಾರದ ಪ್ರಾಯೋಜಿತ ಸೈಬರ್ ಗುಂಪುಗಳು ಈಗ ಭಾರತ, ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆಯುವ ಚುನಾವಣೆ ಟಾರ್ಗೆಟ್ ಮಾಡಿವೆ. ಕುತಂತ್ರಿ ಚೀನಾ ತನ್ನ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಎಐ ರಚಿತ ವಿಷಯಗಳನ್ನು ರಚಿಸಿ, ಅವುಗಳನ್ನು ವಿವಿಧ ಪ್ಲಾಟ್ ಪಾರ್ಮ್ ಗಳಲ್ಲಿ ಹಂಚುತ್ತಿದೆ. ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರುವಂತಹ ವಿಷಯಗಳು ಕಡಿಮೆಯಿದ್ದರೂ, ಮೀಮ್‌ಗಳು, ವಿಡಿಯೋಗಳು ಮತ್ತು ಆಡಿಯೋಗಳನ್ನು ಎಐ ಮೂಲಕ ರಚಿಸಿ ಅವುಗಳನ್ನು ವಿವಿಧ ದೇಶಗಳ ಜನರಿಗೆ ತಲುಪಿಸುವ ಕೆಲಸವನ್ನು ಚೀನಾ ಮಾಡುತ್ತಿದೆ.
ದೂರಸಂಪರ್ಕ ವಲಯದ ಮೇಲೆ ಆಗಾಗ ದಾಳಿ ನಡೆಸುವ ಚೀನಾದ ಸೈಬರ್ ಸಂಸ್ಥೆ ಫ್ಲಾಕ್ಸ್ ಟೈಫೂನ್, 2023ರ ಮಳೆಗಾಲದ ಆರಂಭದಲ್ಲಿ ಮತ್ತು ಚಳಿಗಾಲದ ಆರಂಭದಲ್ಲಿ ಭಾರತ, ಫಿಲಿಪೈನ್ಸ್, ಹಾಂಗ್ ಕಾಂಗ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿ ಹೇಳುತ್ತದೆ. ಫೆಬ್ರವರಿಯಲ್ಲಿ ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್ ಗುಂಪು ಭಾರತದ ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಗೃಹ ಸಚಿವಾಲಯ, ರಿಲಾಯನ್ಸ್, ಏರ್ ಇಂಡಿಯಾ ಸೇರಿ ಭಾರತ ಸರ್ಕಾರದ ಪ್ರಮುಖ ಇಲಾಖೆಗಳನ್ನು ಟಾರ್ಗೆಟ್ ಮಾಡಿತ್ತು. ಈ ವಿಷಯವನ್ನು ತಾನೇ ಹೇಳಿಕೊಂಡಿತ್ತು. ಅಲ್ಲದೇ, ಹಿಂದೆ ಚೀನಾ ಹ್ಯಾಕರ್ ಗಳು ಭಾರತ ಸರ್ಕಾರದಿಂದ 95.2 ಜಿಬಿಯಷ್ಟು ವಲಸಿಗರ ಡೇಟಾವನ್ನು ಹ್ಯಾಕ್ ಮಾಡಿತ್ತು. ಫೈಲ್ ಗಳನ್ನು ಗಿಟ್ ಹಬ್ ನಲ್ಲಿ ಪೋಸ್ಟ್ ಮಾಡಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ತನ್ನ ತನಿಖೆಯಲ್ಲಿ ತಿಳಿಸಿತ್ತು.
ಚೈನೀಸ್ ಕಮ್ಯುನಿಸ್ಟ್ ಪಾರ್ಟಿ ಪ್ರಾಯೋಜಿತ ಸ್ಟೋರ್ಮ್ 1376 ಸಂಸ್ಥೆ ಮಯನ್ಮಾರ್ ನಲ್ಲಿನ ಅಶಾಂತಿಗೆ ಅಮೆರಿಕ ಹಾಗೂ ಭಾರತ ಕಾರಣ ಎಂದು ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಐ ರಚಿತ ವಿಡಿಯೋಗಳನ್ನು ಪೋಸ್ಟ್ ಮಾಡಿದೆ ಎಂದು ಮೈಕ್ರೋಸಾಫ್ಟ್ ವರದಿಯಲ್ಲಿ ಹೇಳಿದೆ. ಕಳೆದ ತಿಂಗಳು, ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ. ಬಿಲ್ ಗೇಟ್ಸ್ ಜೊತೆ ನರೇಂದ್ರ ಮೋದಿ ಅವರು ಬುದ್ಧಿಮತ್ತೆ ಬಳಕೆ ಹಾಗೂ ಅದರಿಂದಾಗುತ್ತಿರುವ ಹಾನಿ ಕುರಿತು ಚರ್ಚಿಸಿದ್ದರು. ಇದರ ಬೆನ್ನಲ್ಲಿಯೇ ಈ ಸಂಗತಿ ಬಹಿರಂಗವಾಗಿದೆ.
ಅಷ್ಟೇ ಅಲ್ಲ, ಮೇಟಾ ಕೂಡ ಚೀನಾ ಸೇರಿದಂತೆ ಇಂತಹ ವಿದ್ರೋಹಿಗಳಿಗೆ ಟಾಂಗ್ ಕೊಡಲು ಮುಂದಾಗಿದೆ. ಮೆಟಾದ ಫೇಸ್ ಬುಕ್, ಯೂಟ್ಯೂಬ್ ಸೇರಿದಂತೆ ತನ್ನ ಎಲ್ಲ ಸಮಾಜಿಕ ಜಾಲತಾಣದ ಪ್ಲಾಟ್ ಫಾರ್ಮ್ ನಲ್ಲಿ ಎಐ ಬಳಕೆ ಮಾಡುವುದನ್ನು ಕಂಡು ಹಿಡಿಯುವ ಸಾಧನೆ ಬಳಕೆ ಮಾಡುವುದಾಗಿ ಘೋಷಿಸಿದೆ. ಮೇ ತಿಂಗಳಿಂದ ಇದು ಜಾರಿಗೆ ಬರಲಿದ್ದು, ಸಾಮಾಜಿಕ ಜಾಲತಾಣದ ಮೂಲಕವೇ ಚೀನಾದ ಆಟಕ್ಕೆ ಬ್ರೇಕ್ ಬೀಳಲಿದೆ. ಚೀನಾದ ಕೃತಕ ಬುದ್ಧಿಗೆ ಸೆಡ್ಡು ಹೊಡೆಯಲು ಭಾರತ ಕೂಡ ಈಗ ಮುಂದಾಗಿದೆ.