ಬಾಗಲಕೋಟೆ: ರಾಜ್ಯದಲ್ಲಿ ಲೋಕಸಭಾ ಕಾವು ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಜಾತಿ ವಿಚಾರಕ್ಕೆ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಮಧ್ಯೆ ಆರೋಪ-ಪ್ರತ್ಯಾರೋಪ ನಡೆದಿದೆ.
ಈ ವೇಳೆ ಮಧ್ಯೆ ಪ್ರವೇಶಿಸಿರುವ ಜಯಮೃತ್ಯುಂಜಯ ಶ್ರೀ ವಿರುದ್ಧ ನಿರಾಣಿ ಗುಡುಗಿದ್ದಾರೆ. ಸ್ವಾಮೀಜಿಯು ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದರೆ ನಾನು ಸುಮ್ಮನಿರುವುದಿಲ್ಲ. ಸ್ವಾಮೀಜಿಯ ನೂರಾರು ವಿಷಯಗಳು ಕೂಡ ನನ್ನ ಬಳಿ ಇವೆ. ಇವರು ನಮ್ಮ ಸಮಾಜದವರು. ಹೀಗಾಗಿ ಮಾತನಾಡಬಾರದು ಎಂಬ ಕಾರಣಕ್ಕೆ ಗೌರವ ಕೊಟ್ಟು ಸುಮ್ಮನಿದ್ದೇನೆ. ಸಮಾಜಕ್ಕೆ ಮೀಸಲಾತಿ ಕೊಡಿಸುವದರ ಬಗ್ಗೆ ಗಮನ ಕೊಟ್ಟು, ಪಕ್ಷದ ಆಂತರಿಕ ವಿಚಾರ ಕೈ ಬಿಡಬೇಕು ಎಂದು ಗುಡುಗಿದ್ದಾರೆ.
ಅಲ್ಲದೇ, ಬಸವಜಯಮೃತ್ಯುಂಜಯ ಸ್ವಾಮೀಜಿ, ‘ಮೃಣಾಲ್ ಹೆಬ್ಬಾಳಕರ್ ಯಾರು ಎಂದು ಬಾಯಿ ಬಿಡಬೇಕು. ಜಗದೀಶ್ ಶೆಟ್ಟರ್ ಹಾಗೂ ಮೃಣಾಲ್ ಇಬ್ಬರು ಒಂದೆ ಸಮಾಜದವರು. ನೀವೇಕೆ ಅಲ್ಲಿ ಪ್ರಚಾರ ಮಾಡುತ್ತಿದ್ದೀರಿ. ನಿಮ್ಮ ಸಮಾಜದವರು ಇದ್ದಲ್ಲಿ ಹೋಗಿ ಪ್ರಚಾರ ಮಾಡಿ ಎಂದು ಸಲಹೆ ನೀಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಗಂಡ ಬಣಜಿಗ. ಮಗನಿಗೆ ತಂದೆ ಮನೆ ಹೆಸರು ಬರುತ್ತದೆ. ಹೀಗಾಗಿ ಆತ ಬಣಜಿಗ ಎಂದು ನಿರಾಣಿ ಆರೋಪಿಸಿದ್ದಾರೆ.