ಕಲಬುರಗಿ: ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ ಐಎ ತೀವ್ರಗೊಳಿಸಿದೆ. 10 ದಿನಗಳು ಕಳೆದರೂ ಆರೋಪಿಯ ಸುಳಿವು ಸಿಕ್ಕಿಲ್ಲ
ಸದ್ಯ ಆರೋಪಿ ಕಲಬುರಗಿಗೆ ಬಂದಿರುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ಎನ್ ಐಎ ಅಧಿಕಾರಿಗಳು ಕಲಬುರಗಿಯಲ್ಲಿ ಬೀಡು ಬಿಟ್ಟಿದ್ದಾರೆ. ಶನಿವಾರದಿಂದಲೂ ಎನ್‍ಐಎ ತಂಡ ಕಲಬುರಗಿಯಲ್ಲಿ ಬಾಂಬರ್ ನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಕಲಬುರಗಿಯ ರಾಮ ಮಂದಿರ ಸರ್ಕಲ್ ಹತ್ತಿರ ಬಾಂಬರ್ ಬಸ್ಸಿನಿಂದ ಇಳಿದಿರುವ ಕುರಿತು ತಂಡ ಮಾಹಿತಿ ಪಡೆದಿದೆ. ಹೀಗಾಗಿ ರಾಮ ಮಂದಿರ ಸರ್ಕಲ್ ನಿಂದ ಬಾಂಬರ್ ಎಲ್ಲಿ ಹೋಗಿದ್ದಾನೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಲಬುರಗಿಯ ರೋಜಾ ಪ್ರದೇಶದಲ್ಲಿಯೇ ಅಧಿಕಾರಿಗಳು ನಿನ್ನೆ ಅರ್ಧ ದಿನ ಕಳೆದಿದ್ದಾರೆ. ಪಿಎಫ್‍ಐ, ಎಸ್‍ಡಿಪಿಐ ಜೊತೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ತಲಾಶ್ ನಡೆಸಿದ್ದಾರೆ.
ಪಿಎಫ್‍ಐ ಸದಸ್ಯರ ಜೊತೆ ಸಂಪರ್ಕಕ್ಕೆ ಬಂದಿರುವ ಶಂಕೆಯ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಂದು ಕೂಡ ಕಲಬುರಗಿಯಲ್ಲೇ ಅಧಿಕಾರಿಗಳು ತನಿಖೆ ಮುಂದುವರಿಸಲಿದ್ದಾರೆ. ಬಾಂಬರ್ ಫೋಟೋಗಳನ್ನು ಶನಿವಾರ ಎನ್ ಐಎ ಮತ್ತೆ ಬಿಡುಗಡೆ ಮಾಡಿದ್ದು, ಆರೋಪಿಯ ಸುಳಿವು ಸಿಕ್ಕಲ್ಲಿ 08029510900, 8904241100 ಗೆ ಕರೆ ಮಾಡಿ ಅಥವಾ ಯಾವುದೇ ಮಾಹಿತಿಯೊಂದಿಗೆ [email protected] ಗೆ ಇಮೇಲ್ ಮಾಡಬಹುದು ಎಂದು ಎನ್ ಐಎ ತಿಳಿಸಿದೆ.