ನಾಗಪುರ: ಇಡೀ ಕುಟುಂಬಸ್ಥರು ಜೈಲು ಪಾಲಾಗುತ್ತಿದ್ದಂತೆ ಒಳ ನುಗ್ಗಿದ್ದ ಖದೀಮರು ಮನೆಯನ್ನೆಲ್ಲ ಗುಡಿಸಿ ಗುಂಡಾಂತರ ಮಾಡಿರುವ ಘಟನ ನಡೆದಿದೆ.
ದೌರ್ಜನ್ಯ ಪ್ರಕರಣವೊಂದರಲ್ಲಿ ಇಡೀ ಕುಟುಂಬ ಜೈಲು ಸೇರಿತ್ತು. ಆನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿತ್ತು. ಆಗ ಇಡೀ ಕುಟುಂಬಕ್ಕೆ ಶಾಕ್ ಎದುರಾಗಿತ್ತು. 17 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಸೇರಿದಂತೆ ಹಲವು ಸಾಮಗ್ರಿಗಳನ್ನು ಖದೀಮರು ದೋಚಿದ್ದಾರೆ.
ಘಟನೆ ಕುರಿತು ದತ್ತವಾಡಿ ಎಂಬಲ್ಲಿ ಕುಟುಂಬದ ವಿರುದ್ಧ ಮಹಿಳೆಯೊಬ್ಬರು ದೌರ್ಜನ್ಯ ಪ್ರಕರಣ ದಾಖಲು ಮಾಡಿದ್ದರು. ಹೀಗಾಗಿ, ಅರುಣ್ ಕುಮಾರ್ ತ್ರಿಪಾಠಿ ಎಂಬುವರ ಇಡೀ ಕುಟುಂಬ ಜೈಲಿನಲ್ಲಿತ್ತು. ಜಾಮೀನಿನ ನಂತರ ಮನೆಗೆ ಹೋದ ಕೆಲವೇ ಹೊತ್ತಿನಲ್ಲಿ ಮತ್ತೆ ಪೊಲೀಸರ ಎದುರು ಪ್ರತ್ಯಕ್ಷರಾಗಿದ್ದರು. ಅಚ್ಚರಿಗೊಂಡ ಪೊಲೀಸರು ಕಾರಣ ಕೇಳಿದಾಗ ತಮ್ಮ ಮನೆಯಲ್ಲಿ ಆಗಿರುವ ಕಳ್ಳತನದ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರು ಜೈಲಿನಲ್ಲಿರುವ ವಿಷಯ ಗೊತ್ತಾಗಿಯೇ ಈ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ.