ಐಪಿಎಲ್ 17ನೇ ಆವೃತ್ತಿಯಲ್ಲಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೇಂಟ್ಸ್ ತಂಡಗಳ ಮಧ್ಯೆ ಕಾಳಗ ನಡೆಯಲಿದೆ.
ಇದು ಪ್ರಸಕ್ತ ಸಾಲಿನ ಆರ್ ಸಿಬಿಗೆ ನಾಲ್ಕನೇ ಪಂದ್ಯವಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈಗಾಗಲೇ ಆಡಿರುವ ಮೂರು ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಲಕ್ನೋ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಸೋಲು, ಒಂದು ಜಯ ಕಂಡು 2 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
ಮಾರ್ಚ್ 22 ರಂದು ನಡೆದ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ಬಳಿಕ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಓವರ್ನಲ್ಲಿ ಗೆದ್ದಿತು. ಮೂರನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಸೋತ ಎಲ್ಲ ಪಂದ್ಯಗಳಲ್ಲಿ ಆರ್ಸಿಬಿ ಸೋಲಿಗೆ ಬೌಲರ್ಗಳು ಮುಖ್ಯಕಾರಣರಾದರು. ಇಂದು ಎರಡು ವಿಭಾಗದಲ್ಲಿ ಮಿಂಚುವ ಅನಿವಾರ್ಯತೆ ಕೂಡ ಆರ್ ಸಿಬಿಗೆ ಇದೆ.
ಹೀಗಾಗಿ ಇಂದಿನ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಆಗುವುದು ಖಚಿತವಾಗಿದೆ. ಮೂರೂ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಸೀಮರ್ ಅಲ್ಜಾರಿ ಜೋಸೆಫ್ ದುಬಾರಿಯಾದರು. ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ರಜತ್ ಪಾಟಿದರ್ಗೆ ಇಂದು ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.