ಪ್ರಸಕ್ತ ಸಾಲಿನ 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನಿಂದ ಕಂಗೆಟ್ಟಿದೆ. ಇದರ ಮಧ್ಯೆಯೂ ಈಗ ಸಾಮಾಜಿಕ ಕಾಳಜಿ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು ತಂಡವು ಇಲ್ಲಿಯವರೆಗೆ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ 2 ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ. ಹಾಗಾಗಿ, ಆರ್ ಸಿಬಿ ಪ್ಲೇ ಆಫ್ ಗೆ ಏರಬೇಕಾದರೆ, ಇನ್ನುಳಿದ ಎಲ್ಲ ಪಂದ್ಯಗಳನ್ನೂ ಗೆಲ್ಲುವ ಅನಿವಾರ್ಯತೆ ಎದುರಿಸುತ್ತಿದೆ. ಈ ಅನಿವಾರ್ಯತೆಯ ನಡುವೆಯೂ, “ಆರ್ ಸಿಬಿ ಗ್ರೂಪ್” ತಮ್ಮ ಮಾದರಿ ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಮನ ಗೆದ್ದಿದೆ.
ಭಾನುವಾರದಂದು ನಡೆಯುವ ಪಂದ್ಯದಲ್ಲಿ ಬೆಂಗಳೂರು ತಂಡವು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8ನೇ ಪಂದ್ಯವನ್ನಾಡಲಿದ್ದು, ಅಂದು ‘ಹಸಿರು ಜೆರ್ಸಿ’ ತೊಟ್ಟು ಕಣಕ್ಕೆ ಇಳಿಯಲಿದೆ. ಸ್ವಚ್ಛತೆ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಪ್ರತಿ ಬಾರಿಯೂ ಹಸಿರು ಜೆರ್ಸಿಯನ್ನು ಧರಿಸಿ ಒಂದು ಪಂದ್ಯ ಆಡುತ್ತದೆ. ಅದರಂತೆ ಕಳೆದ ಬಾರಿ ಆರ್ಸಿಬಿ ತನ್ನ ಈ ಅಭಿಯಾನದಡಿಯಲ್ಲಿ ಬೆಂಗಳೂರಿನ ಮೂರು ಕೆರೆಗಳನ್ನು ಪುನರುಜ್ಜೀವನಗೊಳಿಸುವುದಕ್ಕೆ ಮುಂದಾಗಿತ್ತು. ಸದ್ಯ ಕೈಗೆತ್ತಿಕೊಂಡಿದ್ದ ಕೆಲಸವನ್ನು ವರ್ಷದೊಳಗೆ ಪೂರೈಸಿದ್ದು, ತನ್ನ ಸಮಾಜಮುಖಿ ಕಾರ್ಯದ ವಿಡಿಯೋವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
‘ಗೋ ಗ್ರೀನ್’ ಅಭಿಯಾನದಡಿಯಲ್ಲಿ ಮೂರು ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. ಕಣ್ಣೂರು ಕೆರೆಗೆ ನಾಗರಿಕ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಇಟ್ಟಗಲ್ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಗಳ ಪುನಶ್ಚೇತನ ಕಾರ್ಯ ಪೂರ್ಣಗೊಳಿಸಿದೆ. ಕೇವಲ ಅಂತರ್ಜಲ ಮತ್ತು ಮೇಲ್ಮೈ ನೀರಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದ ಈ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, ಆರ್ ಸಿಬಿಯ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.