ಗುವಾಹಟಿ: ಸಿಂಗಾಪುರದಲ್ಲಿ 2 ದಿನಗಳ ಹಿಂದೆ ಮೃತಪಟ್ಟ ಖ್ಯಾತ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ಅವರ ಪಾರ್ಥಿವ ಶರೀರವನ್ನು ಇಂದು ದೆಹಲಿಯಿಂದ ಗುವಾಹಟಿ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಅಲ್ಲಿಂದ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಪತಿಯ ಪಾರ್ಥಿವ ಶರೀರವನ್ನು ಸ್ವೀಕರಿಸಿದ ಅವರ ಪತ್ನಿ ಗರಿಮಾ ಸೈಕಿಯಾ ಗರ್ಗ್ ಅವರು ಶವಪೆಟ್ಟಿಗೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ದೃಶ್ಯ ಮನಕಲಕುವಂತಿತ್ತು.
ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಿಧನರಾದ ‘ಕಿಂಗ್ ಆಫ್ ಹಮ್ಮಿಂಗ್’ ಎಂದೇ ಖ್ಯಾತರಾಗಿದ್ದ ಜುಬೀನ್ ಅವರ ಅಂತಿಮ ದರ್ಶನ ಪಡೆಯಲು ಅಸ್ಸಾಂನಾದ್ಯಂತ ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಅಂತಿಮ ದರ್ಶನಕ್ಕೆ ವ್ಯವಸ್ಥೆ
ಅಭಿಮಾನಿಗಳು ಮತ್ತು ಹಿತೈಷಿಗಳಿಗಾಗಿ ಜುಬೀನ್ ಅವರ ಪಾರ್ಥಿವ ಶರೀರವನ್ನು ಗುವಾಹಟಿಯ ಸರುಸಜೈನಲ್ಲಿರುವ ಅರ್ಜುನ್ ಭೋಗೇಶ್ವರ್ ಬರುವಾ ಕ್ರೀಡಾ ಸಂಕೀರ್ಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಅಸ್ಸಾಂ ಸರ್ಕಾರ ಘೋಷಿಸಿದೆ. ತಮ್ಮ ನೆಚ್ಚಿನ ಗಾಯಕನ ಅಂತಿಮ ಯಾತ್ರೆಯನ್ನು ಗೌರವಯುತವಾಗಿ ನಡೆಸಲು ಸಹಕರಿಸುವಂತೆ ಸರ್ಕಾರ ಮನವಿ ಮಾಡಿದೆ.
ನಿಧನರಾಗಿದ್ದು ಹೇಗೆ?
ಜುಬೀನ್ ಗರ್ಗ್ ಅವರು ಸ್ಕೂಬಾ ಡೈವಿಂಗ್ ಮಾಡುವಾಗ ಮೃತಪಟ್ಟಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿದ್ದವು. ಈಜುವಿಕೆ ವೇಳೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು, ಪ್ರಜ್ಞೆ ತಪ್ಪಿದ್ದರು. ತಕ್ಷಣ ಅವರನ್ನು ಸಿಂಗಾಪುರದ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 2:30ರ ಸುಮಾರಿಗೆ ನಿಧನರಾದರು ಎಂದು ವೈದ್ಯರು ಘೋಷಿಸಿದ್ದರು.
ಆದರೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪ್ರಕಾರ, ಜುಬೀನ್ ಅವರು ಲೈಫ್ ಜಾಕೆಟ್ ಇಲ್ಲದೆ ಸಮುದ್ರದಲ್ಲಿ ಈಜುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅವರು ವಿಹಾರ ನೌಕೆಯಿಂದ ಲೈಫ್ ಜಾಕೆಟ್ ಧರಿಸಿ ಸಮುದ್ರಕ್ಕೆ ಹಾರಿದ ವಿಡಿಯೋವಿದ್ದು, ನಂತರ ಅದನ್ನು ತೆಗೆದು ಈಜಲು ಹೋದಾಗ ಈ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ
ಜುಬೀನ್ ಗರ್ಗ್ ಅವರ ನಿಧನಕ್ಕೆ ಅಸ್ಸಾಂ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಸಂಭ್ರಮಾಚರಣೆಗಳು ಇರುವುದಿಲ್ಲ ಎಂದು ತಿಳಿಸಿದೆ.
‘ಗ್ಯಾಂಗ್‌ಸ್ಟರ್’ ಚಿತ್ರದ ‘ಯಾ ಅಲಿ’ ಹಾಡಿನ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ್ದ ಜುಬೀನ್, ಅಸ್ಸಾಮಿ, ಬಂಗಾಳಿ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದರು. ‘ಕಾಂಚನಜುಂಗಾ’, ‘ಮಿಷನ್ ಚೀನಾ’ ಮುಂತಾದ ಚಿತ್ರಗಳಲ್ಲಿ ನಟಿಸಿ, ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದರು.