ನ್ಯೂಯಾರ್ಕ್: ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಡೆಮಾಕ್ರಟಿಕ್ ಪಕ್ಷದ 34 ವರ್ಷದ ಈ ಯುವ ನಾಯಕ, ಮಾಜಿ ಗವರ್ನರ್ ಆಂಡ್ರ್ಯೂ ಕ್ಯೂಮೊ ಮತ್ತು ರಿಪಬ್ಲಿಕನ್ ಪಕ್ಷದ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮೇಯರ್, ದಕ್ಷಿಣ ಏಷ್ಯಾ ಮೂಲದ ಮೊದಲ ಹಾಗೂ ಕಳೆದ ಒಂದು ಶತಮಾನದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡೆಮಾಕ್ರಟಿಕ್ ಪಕ್ಷಕ್ಕೆ ದೊಡ್ಡ ಜಯ
ಮಮ್ದಾನಿ ಅವರ ಗೆಲುವು ಡೆಮಾಕ್ರಟಿಕ್ ಪಕ್ಷಕ್ಕೆ ದೊಡ್ಡ ಉತ್ತೇಜನ ನೀಡಿದೆ. ತಮ್ಮ ಪ್ರಗತಿಪರ ಹಾಗೂ ಜನಪರ ಆಲೋಚನೆಗಳಿಂದಾಗಿ ಅವರು ಚುನಾವಣೆಯಲ್ಲಿ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 1 ರಂದು ಅಧಿಕಾರ ವಹಿಸಿಕೊಳ್ಳಲಿರುವ ಮಮ್ದಾನಿ, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ನ್ಯೂಯಾರ್ಕ್ ಸಬ್‌ವೇ ರೈಲು ಸಿಟಿ ಹಾಲ್‌ಗೆ ಬಂದು ನಿಲ್ಲುವ ವೀಡಿಯೊವನ್ನು ಹಂಚಿಕೊಂಡು, “ಮುಂದಿನ ಮತ್ತು ಕೊನೆಯ ನಿಲ್ದಾಣ ಸಿಟಿ ಹಾಲ್” ಎಂಬ ಸಂದೇಶದೊಂದಿಗೆ ತಮ್ಮ ಗೆಲುವನ್ನು ಖಚಿತಪಡಿಸಿದ್ದಾರೆ. ನ್ಯೂಯಾರ್ಕ್ ಮೇಯರ್ ಕಚೇರಿ ಸಿಟಿ ಹಾಲ್‌ನಲ್ಲಿಯೇ ಇರುವುದು ವಿಶೇಷ.
ಯಾರು ಈ ಜೊಹ್ರಾನ್ ಮಮ್ದಾನಿ?
1991ರ ಅಕ್ಟೋಬರ್ 18ರಂದು ಉಗಾಂಡಾದ ಕಂಪಾಲಾದಲ್ಲಿ ಜನಿಸಿದ ಜೊಹ್ರಾನ್ ಮಮ್ದಾನಿ, ಉಗಾಂಡಾದ ಖ್ಯಾತ ವಿದ್ವಾಂಸ ಮಹಮೂದ್ ಮಮ್ದಾನಿ ಮತ್ತು ಭಾರತದ ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರ. ಉಗಾಂಡಾದಲ್ಲೇ ಬಾಲ್ಯ ಕಳೆದ ಅವರು, ನಂತರ ನ್ಯೂಯಾರ್ಕ್‌ಗೆ ಬಂದು ನೆಲೆಸಿದರು. ಬೋಡೋಯಿನ್ ಕಾಲೇಜಿನಿಂದ ಆಫ್ರಿಕಾನಾ ಸ್ಟಡೀಸ್‌ನಲ್ಲಿ ಪದವಿ ಪಡೆದಿದ್ದಾರೆ.
ತಮ್ಮ ಪ್ರಚಾರದ ಸಮಯದಲ್ಲಿ, ಬಾಡಿಗೆ ಸ್ಥಿರೀಕರಣ, 2 ಲಕ್ಷ ಸಾರ್ವಜನಿಕ ವಸತಿ ಘಟಕಗಳ ನಿರ್ಮಾಣ, ಸಾರ್ವತ್ರಿಕ ಶಿಶುಪಾಲನಾ ಕೇಂದ್ರ, ಉಚಿತ ಶಿಕ್ಷಣ, ಉಚಿತ ಬಸ್ ಪ್ರಯಾಣ ಮತ್ತು ನಗರದಿಂದಲೇ ದಿನಸಿ ಅಂಗಡಿಗಳನ್ನು ನಡೆಸುವಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಘೋಷಿಸಿದ್ದರು. 2030ರ ವೇಳೆಗೆ ಕನಿಷ್ಠ ವೇತನವನ್ನು ಗಂಟೆಗೆ 30 ಡಾಲರ್‌ಗೆ ಹೆಚ್ಚಿಸುವ ಭರವಸೆಯನ್ನೂ ನೀಡಿದ್ದರು.
ಮಮ್ದಾನಿ ಕಂಡರೆ ಟ್ರಂಪ್‌ಗೆ ಆಗದು
ಮಮ್ದಾನಿ ಅವರ ಉಮೇದುವಾರಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಮ್ದಾನಿ ಅವರನ್ನು ‘ಕಮ್ಯುನಿಸ್ಟ್’ ಎಂದು ಕರೆದಿದ್ದ ಟ್ರಂಪ್, ಅವರ ವಿರುದ್ಧ ಸ್ಪರ್ಧಿಸಿದ್ದ ಆಂಡ್ರ್ಯೂ ಕ್ಯೂಮೊ ಅವರನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲದೆ, ಮಮ್ದಾನಿ ಗೆದ್ದರೆ ಅವರನ್ನು ಬಂಧಿಸಿ, ಗಡಿಪಾರು ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಈ ಎಲ್ಲಾ ವಿರೋಧಗಳನ್ನು ಮೀರಿ ಮಮ್ದಾನಿ ಗೆದ್ದು ಬೀಗಿದ್ದಾರೆ.
ಗೆಲುವಿನ ಭಾಷಣದಲ್ಲಿ ನೆಹರೂ ಸ್ಮರಣೆ
ತಮ್ಮ ಗೆಲುವಿನ ನಂತರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜೊಹ್ರಾನ್ ಮಮ್ದಾನಿ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ “ಟ್ರಿಸ್ಟ್ ವಿತ್ ಡೆಸ್ಟಿನಿ” (Tryst with Destiny) ಭಾಷಣವನ್ನು ಸ್ಮರಿಸಿದರು. “ಇತಿಹಾಸದಲ್ಲಿ ಅಪರೂಪವಾಗಿ ಬರುವ ಒಂದು ಕ್ಷಣ ನಮ್ಮೆದುರಿಗಿದೆ. ನಾವು ಹಳೆಯದರಿಂದ ಹೊಸದಕ್ಕೆ ಕಾಲಿಟ್ಟಿದ್ದೇವೆ. ಒಂದು ಯುಗ ಮುಗಿದು, ದೀರ್ಘಕಾಲ ದಮನಿತವಾಗಿದ್ದ ರಾಷ್ಟ್ರದ ಆತ್ಮವು ಧ್ವನಿ ಪಡೆದಿದೆ. ಇಂದು ರಾತ್ರಿ, ನಾವು ಹಳೆಯದರಿಂದ ಹೊಸದಕ್ಕೆ ಕಾಲಿಟ್ಟಿದ್ದೇವೆ” ಎಂದು ನೆಹರೂ ಅವರ ಮಾತುಗಳನ್ನು ಉಲ್ಲೇಖಿಸಿದರು. ಈ ಗೆಲುವು ನ್ಯೂಯಾರ್ಕ್‌ಗೆ ಹೊಸ ಯುಗದ ಆರಂಭವಾಗಿದ್ದು, ನಗರದ ಜೀವನ ವೆಚ್ಚದ ಬಿಕ್ಕಟ್ಟನ್ನು ನಿಭಾಯಿಸಲು ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ಜಾರಿಗೆ ತರುವುದಾಗಿ ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ 5 ಹುದ್ದೆಗಳ ನೇಮಕ : 98 ಸಾವಿರ ರೂ. ಸಂಬಳ



















