ಬೆಂಗಳೂರು: ಸಿಲಿಕಾನ್ ಸಿಟಿ(Bengaluru) ಯಲ್ಲಿ ರಸ್ತೆಗಳ ಗುಂಡಿಗಳ ಆಕಾರ ಸೊನ್ನೆ ರೀತಿ ಕಾಣುವಂತೆಯೇ ನಗರದ ಅಭಿವೃದ್ಧಿಯೂ ಸೊನ್ನೆಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್(R Ashok) ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಅಭಿವೃದ್ಧಿಗಾಗಿ ಆದಷ್ಟು ಬೇಗ ಬಿಬಿಎಂಪಿ ಚುನಾವಣೆ (BBMP Election) ನಡೆಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿ ಸೊನ್ನೆಯಾಗಿದೆ. ರಸ್ತೆ ಗುಂಡಿಗಳಿಂದ ಬಿದ್ದು ಗಾಯಕ್ಕೊಳಗಾಗಿ ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಎಲ್ಲೆಲ್ಲೂ ಕಸ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಿಮಾಲಯದ ಶಿಖರದಂತೆ ನಗರದ ಅಭಿವೃದ್ಧಿಯನ್ನು ಬ್ರ್ಯಾಂಡ್ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಅವರೇ ಬೆಂಗಳೂರನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿಯೇ ಅವರ ವಿರುದ್ಧ ಹೋರಾಟ ನಡೆಸಲು ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಈಗ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಿದರೆ ಸಾಕು. ರಸ್ತೆ ಮೇಲ್ಭಾಗದಲ್ಲೇ ಸುರಂಗ ನಿರ್ಮಾಣವಾಗುತ್ತಿರುವಾಗ 150 ಅಡಿ ಕೆಳಗೆ ಸುರಂಗ ಕೊರೆಯಲು ಹೊರಟಿದ್ದಾರೆ. ಜನರು ರೊಚ್ಚಿಗೆದ್ದಿದ್ದಾರೆ. ಬೆಂಗಳೂರು ಇಂದು ಸರಿ ಹೋಗಲಿದೆ ಎಂದು ಜನರು ಕಾಯುತ್ತಿದ್ದಾರೆ. ಬೆಂಗಳೂರಿಗೆ ಬೆಂಗಳೂರಿನ ಸಚಿವರಿಲ್ಲ. ಬೆಂಗಳೂರು ಡಾನ್, ಮಾಫಿಯಾಗಳ ಕೈಗೆ ಸಿಲುಕಿದೆ. ಮೈಸೂರು ಗಲಭೆ, ಬೆಂಗಳೂರಿನ ಬಾಂಬ್ ಬ್ಲಾಸ್ಟ್, ಅತ್ಯಾಚಾರ ಮೊದಲಾದ ಅಪರಾಧಿ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನ ಜವಾಬ್ದಾರಿ ವಹಿಸಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಿ, ನಗರವನ್ನು ದೇವರಿಗೆ ಅರ್ಪಣೆ ಮಾಡಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.