ಬೆಂಗಳೂರು: ಪಂಜಾಬ್ ಕಿಂಗ್ಸ್ ತಂಡದ ದುಬಾರಿ ಸ್ಪಿನ್ ಬೌಲಿಂಗ್ ಖರೀದಿಯಾದ ಯುಜ್ವೇಂದ್ರ ಚಹಲ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಹಿನ್ನೆಲೆಯಲ್ಲಿ ತರಬೇತಿ ಆರಂಭಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದಿಂದ ಬಿಡುಗಡೆಗೊಂಡಿದ್ದ ಚಹಲ್ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗಿ ಇದೀಗ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ ಚಹಲ್ ಅವರೊಂದಿಗಿನ ವಿಡಿಯೊ ಬಿಡುಗಡೆ ಮಾಡಿದ್ದಾರೆ. ನಿರೀಕ್ಷೆಯಂತೆ ಅವರು ಬೌಲಿಂಗ್ ಜತೆಗೆ ಬ್ಯಾಟಿಂಗ ಅಭ್ಯಾಸ ಮಾಡಿದ್ದಾರೆ. ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರಿಂದ ಸಲಹೆಗಳನ್ನು ಪಡೆದಿದ್ದಾರೆ. ಈ ವೇಳೆ ಚಹಲ್, ”ಪಂಜಾಬ್ ತಂಡಕ್ಕೆ ಓಪನರ್ ಬೇಕಾದರೆ, ತಾನು ಸಿದ್ಧ,” ಎಂದು ಹೇಳುವುದು ಹಾಸ್ಯಾಸ್ಪದ ಎನಿಸಿತ್ತು.
ಕೋಚ್ ಪಾಂಟಿಂಗ್ ಅಭಿಮಾನ
ಕೋಚ್ ಪಾಂಟಿಂಗ್ ತಮ್ಮ ಪಾಡ್‌ಕಾಸ್ಟ್‌ನಲ್ಲಿ ತಾವು ತಂಡದಲ್ಲಿ ಮೂರು ಭಾರತೀಯ ಆಟಗಾರರನ್ನು ಹೊಂದಲು ಬಯಸುವುದಾಗಿ ಹೇಳಿದ್ದರು. ಅದರಲ್ಲಿ ಯುಜ್ವೇಂದ್ರ ಚಹಲ್ ಒಬ್ಬರು. ಹರಾಜಿನಲ್ಲಿ ಅತ್ಯಧಿಕ ಹಣ ನೀಡಿರುವ ಪಂಜಾಬ್ ಕಿಂಗ್ಸ್, ಚಹಲ್‌ಗೆ ಅವಕಾಶ ಕೊಡುವುದು ನಿಶ್ಚಿತ.
“ನಾನು ಪಂಜಾಬ್ ಕಿಂಗ್ಸ್‌ನಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಇದ್ದ ಅರ್ಷದೀಪ್ ಸಿಂಗ್ ಅವನ್ನುಉಳಿಸಲು ಯತ್ನಿಸಿದೆ. ಶ್ರೇಯಸ್ ಅಯ್ಯರ್ ಮತ್ತು ಯುಜ್ವೇಂದ್ರ ಚಹಲ್ ಅವರನ್ನು ತರಲು ಬಯಸಿದ್ದೆ. ನಮ್ಮ ತಂಡದ ಭಾರತೀಯ ಆಟಗಾರರು ಬಲಿಷ್ಠವಾಗಿದ್ದಾರೆ,” ಎಂದು ಪಾಂಟಿಂಗ್ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.
“ಹರಾಜು ನಡೆಯುತ್ತಾ ಹೋಗಿದಂತೆ ನಾವು ಕೆಲವು ಬದಲಾವಣೆಗಳನ್ನು ಮಾಡಬೇಕಾಯಿತು, ಆದರೆ ಒಂದು ಉತ್ತಮ ತಂಡವನ್ನು ಕಟ್ಟುವ ಕಡೆಗೆ ನಮ್ಮ ಗಮನ ಇತ್ತು. ಸರಿಯಾದ ಆಟಗಾರರನ್ನು ತಂಡದಲ್ಲಿ ಹೊಂದಲು ನಾನು ಪ್ರಯತ್ನಿಸುತ್ತಿದ್ದೆ. ಈ ಮೂರು ಆಟಗಾರರ ಆಯ್ಕೆ ಅವಶ್ಯಕವಾಗಿತ್ತು,” ಎಂದು ಅವರು ಹೇಳಿದ್ದಾರೆ.
ಚಹಲ್ 2025 ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವನ್ನು ಆರ್ಜೆ ಮಶ್ವಾವ್ ಜತೆ ವೀಕ್ಷಿಸಿದ್ದರು. ಇತ್ತೀಚೆಗೆ ಚಹಲ್ ಮತ್ತು ಮಾಜಿ ಪತ್ನಿ ಧನಶ್ರೀ ವರ್ಮಾ ಮುಂಬೈನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಚಹಲ್ಗಾಗಿ ಪೈಪೋಟಿ
2025ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ಯುಜ್ವೇಂದ್ರ ಚಹಲ್ ಅವರನ್ನು ಖರೀದಿಸಿತ್ತು. ತೀವ್ರ ಹೋರಾಟದ ಬಳಿಕ 18 ಕೋಟಿ ರೂಪಾಯಿ ಮೊತ್ತಕ್ಕೆ ಅವರು ತಂಡಕ್ಕೆ ಸೇರ್ಪಡೆಗೊಂಡಿದ್ದರು. ಈ ಮೊತ್ತದೊಂದಿಗೆ, ಚಹಲ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇದುವರೆಗೆ ಈ ಸ್ಥಾನ 2022ರಲ್ಲಿ ವನಿಂದು ಹಸರಂಗಾ ವಶದಲ್ಲಿತ್ತು. ಆ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 10.75 ಕೋಟಿ ರೂಪಾಯಿ ನೀಡಿತ್ತು.