ಆಯುರ್ವೇದಿಕ್ ಚಿಕಿತ್ಸೆಗೆ ಅಂತಾ ಬಂದ ಪೆರುಗ್ವೆ ಯುವರಾಣಿ ನಿಶ್ಚಿತಾರ್ಥ ಉಂಗುರವೇ ಭಾರತದಲ್ಲಿ ಕಳೆದುಹೋಗಿತ್ತು. ಮಧ್ಯಪ್ರದೇಶದ ಚಿಂದ್ವಾಡ ಬಳಿಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಯುವರಾಣಿ ಇಟಿಕಾ ಕೇಲ್ಟೆಯವರ ಉಂಗುರ ನೀರುಪಾಲಾಗಿತ್ತು.
ಹೌದು. ಯುವರಾಣಿಯ ನಿಶ್ಚಿತಾರ್ಥದ 22 ಲಕ್ಷ ಮೌಲ್ಯದ ಉಂಗುರ ಇಲ್ಲಿನ ಚೋಟಾ ಮಹಾದೇವ್ ಜಲಪಾತದಲ್ಲಿ ಕಳೆದು ಹೋಗಿತ್ತು. ಪ್ರಕೃತಿ ಚಿಕಿತ್ಸೆ ಮಧ್ಯೆ ಬಿಡುವು ಮಾಡಿಕೊಂಡು ಜಲಪಾತಕ್ಕೆ ಭೇಟಿ ನೀಡಿದ್ದ ಯುವರಾಣಿ ಅಲ್ಲೇ ತಮ್ಮ ಉಂಗುರ ಕಳೆದುಕೊಂಡು ಚಿಂತೆಗೀಡಾಗಿದ್ದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಹಲವರು ಸತತ 6 ಗಂಟೆ ಉಂಗುರಕ್ಕಾಗಿ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಹತಾಶರಾಗಿದ್ದ ಇಟಿಕಾ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ವಾಪಸ್ ಆಗಿದ್ದರು. ಆದ್ರೆ ಅಲ್ಲೇ ಸ್ಥಳದಲ್ಲಿದ್ದ ಶರಬತ್ತು ಮಾರುವ ವ್ಯಾಪಾರಿ, ಬುದ್ಧಿವಂತಿಕೆ ಉಪಯೋಗಿಸಿ ಸ್ಥಳೀಯ ಆದಿವಾಸಿ ಯವಕರ ಪಡೆ ಕಟ್ಟಿದ್ದ. ಅವರನ್ನೆಲ್ಲಾ ಜಲಪಾತಕ್ಕೆ ಇಳಿಸಿ ಉಂಗುರ ಶೋಧ ಆರಂಭಿಸಿದ್ದ. ಜಲಪಾತದ ಉಸುಕು, ಕಸವನ್ನೆಲ್ಲಾ ಎರಡು ದಿನ ಈ ತಂಡ ಜಾಲಾಡಿತ್ತು. ಅಷ್ಟೇ ಇನ್ನೇನು ಯುವರಾಣಿಯ 22 ಲಕ್ಷದ ಉಂಗುರ ಸಿಕ್ಕಿತ್ತು. ಇತ್ತ ಆದಿವಾಸಿಗಳ ಈ ಕಾರ್ಯವನ್ನು ಮೆಚ್ಚಿದ್ದ ಯುವರಾಣಿ 5 ಲಕ್ಷ ಬಹುಮಾನ ನೀಡಲು ಮುಂದಾಗಿದ್ದರು.
ಆದರೆ, ಆ ಯುವಕರು ಯುವರಾಣಿಗೆ ನಯವಾಗಿಯೇ ನೀವು ಭಾರತದ ಅತಿಥಿ. ಹಣ ಬೇಡ ಅಂದಿದ್ದರು. ಆದರೆ ಅಂತಿಮವಾಗಿ ಆದಿವಾಸಿಗಳ ಪರಿಶ್ರಮಕ್ಕೆ ಪ್ರತಿಫಲವಾಗಿ 41 ಸಾವಿರ ನೀಡಲಾಯಿತು. ಇದೇ ವೇಳೆ ಯುವರಾಣಿ ಭಾರತೀಯರ ಪ್ರೀತಿ, ಆತಿಥ್ಯವನ್ನು ಮೆಚ್ಚಿ ಬಹುಪರಾಕ್ ಎಂದಿದ್ದಾರೆ.


















