ಕೋಲ್ಕತ್ತಾ: ಟಿಎಂಸಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿರುವ ಅದೀನಾ ಮಸೀದಿಗೆ ಭೇಟಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರಗಳು ಹೊಸ ವಿವಾದಕ್ಕೆ ಕಾರಣವಾಗಿವೆ. ಪಠಾಣ್ ಅವರು ಮಸೀದಿ ಎಂದು ಉಲ್ಲೇಖಿಸಿದ ಈ ಸ್ಥಳವನ್ನು ಬಿಜೆಪಿ, ‘ಆದಿನಾಥ ದೇವಾಲಯ’ ಎಂದು ಪ್ರತಿಪಾದಿಸಿದೆ.
ಇತ್ತೀಚೆಗೆ ತಮ್ಮ ಮಸೀದಿ ಭೇಟಿಯ ವಿವರ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವೀಟರ್) ನಲ್ಲಿ ಹಂಚಿಕೊಂಡಿದ್ದ ಸಂಸದ ಯೂಸುಫ್ ಪಠಾಣ್, “ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಅದೀನಾ ಮಸೀದಿಯು 14ನೇ ಶತಮಾನದಲ್ಲಿ ಇಲಿಯಾಸ್ ಶಾಹಿ ರಾಜವಂಶದ ಎರಡನೇ ದೊರೆ ಸುಲ್ತಾನ್ ಸಿಕಂದರ್ ಶಾ ಅವರಿಂದ ನಿರ್ಮಿಸಲ್ಪಟ್ಟ ಐತಿಹಾಸಿಕ ಮಸೀದಿಯಾಗಿದೆ. ಇದು ಅಂದಿನ ಕಾಲದಲ್ಲಿ ಭಾರತ ಉಪಖಂಡದ ಅತಿದೊಡ್ಡ ಮಸೀದಿಯಾಗಿತ್ತು” ಎಂದು ಬರೆದುಕೊಂಡಿದ್ದರು.
ಪಠಾಣ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕವು, “ಇದು ಅದೀನಾ ಮಸೀದಿಯಲ್ಲ, ಆದಿನಾಥ ದೇವಾಲಯ,” ಎಂದು ವಾದಿಸಿದೆ. ಈ ಪೋಸ್ಟ್ ನಂತರ, ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಐತಿಹಾಸಿಕ ಆಕರಗಳನ್ನು ಉಲ್ಲೇಖಿಸಿ, “ಈ ಸ್ಮಾರಕವನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆ,” ಎಂದು ಪಠಾಣ್ ಅವರ ಗಮನ ಸೆಳೆದಿದ್ದಾರೆ.
“ವಿವಾದದ ಹಿನ್ನೆಲೆ”
ಕಳೆದ ವರ್ಷ, ವೃಂದಾವನದ ವಿಶ್ವವಿದ್ಯಾ ಟ್ರಸ್ಟ್‌ನ ಅಧ್ಯಕ್ಷರಾದ ಹಿರಣ್ಮಯ್ ಗೋಸ್ವಾಮಿ ನೇತೃತ್ವದ ಅರ್ಚಕರ ಗುಂಪೊಂದು ಈ ಮಸೀದಿಯೊಳಗೆ ಹಿಂದೂ ವಿಧಿವಿಧಾನಗಳನ್ನು ನೆರವೇರಿಸಿತ್ತು. ಮಸೀದಿಯಲ್ಲಿ ಹಿಂದೂ ದೇವತೆಗಳ ಕುರುಹುಗಳನ್ನು ಗುರುತಿಸಿದ್ದ ಅವರು, ಇದನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿದ್ದರು.
ಅರ್ಚಕರು ಪೂಜೆ ನಡೆಸುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಅವರನ್ನು ತಡೆಯಲಾಯಿತು. ನಂತರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಗೋಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಘಟನೆಯ ನಂತರ, ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಗುರುತಿಸಲಾದ ಈ ಮಸೀದಿಯನ್ನು ಮುಚ್ಚಿ, ಸಿಸಿಟಿವಿಗಳನ್ನು ಅಳವಡಿಸಿ, ಪೊಲೀಸ್ ಚೆಕ್‌ಪೋಸ್ಟ್ ಸ್ಥಾಪಿಸಲಾಗಿತ್ತು.
ಎಎಸ್‌ಐ (ASI) ಅಧಿಕೃತ ವೆಬ್‌ಸೈಟ್ ಪ್ರಕಾರ, ಅದೀನಾ ಮಸೀದಿಯು 1369ರಲ್ಲಿ ನಿರ್ಮಾಣಗೊಂಡ ಮುಸ್ಲಿಂ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ. ಇದನ್ನು ಇಲಿಯಾಸ್ ರಾಜವಂಶದ ಎರಡನೇ ದೊರೆ ಸಿಕಂದರ್ ಶಾ ನಿರ್ಮಿಸಿದ್ದು, ಆತನ ಸಮಾಧಿಯೂ ಇಲ್ಲಿದೆ.