ಢಾಕಾ: ಬಾಂಗ್ಲಾದೇಶದಲ್ಲಿ ಕಟ್ಟರ್ ಇಸ್ಲಾಮಿಕ್ ಗುಂಪುಗಳ ತೀವ್ರ ಒತ್ತಡಕ್ಕೆ ಮಣಿದಿರುವ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸಂಗೀತ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸುವ ತನ್ನ ಮಹತ್ವದ ಯೋಜನೆಯನ್ನು ಕೈಬಿಟ್ಟಿದೆ. ಈ ನೇಮಕಾತಿ ಪ್ರಕ್ರಿಯೆಯು ‘ಇಸ್ಲಾಂ-ವಿರೋಧಿ’ ಮತ್ತು ‘ಅನಗತ್ಯ’ ಎಂದು ಆರೋಪಿಸಿದ್ದ ಮೂಲಭೂತವಾದಿ ಸಂಘಟನೆಗಳು, ಬೇಡಿಕೆ ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಬೆದರಿಕೆ ಹಾಕಿದ್ದವು.
ಸರ್ಕಾರ ಯೂಟರ್ನ್
ಬಾಂಗ್ಲಾದೇಶದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವಾಲಯವು ಸೋಮವಾರ ಈ ನಿರ್ಧಾರವನ್ನು ಪ್ರಕಟಿಸಿದ್ದು, ಕಳೆದ ಆಗಸ್ಟ್‌ನಲ್ಲಿ ಹೊರಡಿಸಲಾಗಿದ್ದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು, ಹೊಸದಾಗಿ ರಚಿಸಲಾದ ಸಂಗೀತ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ರದ್ದುಗೊಳಿಸಿದೆ. ಧಾರ್ಮಿಕ ಗುಂಪುಗಳ ಒತ್ತಡಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಸಚಿವಾಲಯದ ಅಧಿಕಾರಿಗಳು ನೇರವಾಗಿ ಉತ್ತರಿಸಲು ನಿರಾಕರಿಸಿದ್ದಾರೆ.
ಮೂಲಭೂತವಾದಿಗಳ ವಿರೋಧವೇಕೆ?
ಹೆಫಾಸತ್-ಎ-ಇಸ್ಲಾಂ ಸೇರಿದಂತೆ ಹಲವು ಕಟ್ಟರ್ ಇಸ್ಲಾಮಿಕ್ ಸಂಘಟನೆಗಳು ಈ ನೇಮಕಾತಿಯನ್ನು ‘ಇಸ್ಲಾಂ-ವಿರೋಧಿ ಕಾರ್ಯಸೂಚಿ’ ಎಂದು ಬಣ್ಣಿಸಿದ್ದವು. ಸೆಪ್ಟೆಂಬರ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ, “ಭವಿಷ್ಯದ ಪೀಳಿಗೆಯನ್ನು ನಂಬಿಕೆಯಿಲ್ಲದವರನ್ನಾಗಿ ಮಾಡಲು ಮತ್ತು ಶಾಲಾ ಮಕ್ಕಳನ್ನು ನಾಶಮಾಡಲು ಹೆಣೆದ ನಾಸ್ತಿಕ ತತ್ವಶಾಸ್ತ್ರದ ಭಾಗವಿದು” ಎಂದು ಆರೋಪಿಸಿದ್ದವು.
ಇಸ್ಲಾಮಿ ಆಂದೋಲನ ಬಾಂಗ್ಲಾದೇಶದ ಮುಖ್ಯಸ್ಥ ಸೈಯದ್ ರೆಝೌಲ್ ಕರೀಮ್, “ನೀವು ಸಂಗೀತ ಶಿಕ್ಷಕರನ್ನು ನೇಮಿಸಲು ಬಯಸುತ್ತೀರಾ? ಅವರು ಏನು ಕಲಿಸುತ್ತಾರೆ? ನಮ್ಮ ಮಕ್ಕಳನ್ನು ಅಶಿಸ್ತು, ಅವಿಧೇಯ ಮತ್ತು ಚಾರಿತ್ರ್ಯಹೀನರನ್ನಾಗಿ ಮಾಡಲು ಹೊರಟಿದ್ದೀರಾ? ನಾವು ಇದನ್ನು ಎಂದಿಗೂ ಸಹಿಸುವುದಿಲ್ಲ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಈ ಬೆಳವಣಿಗೆಯು, ಶೇಖ್ ಹಸೀನಾ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳು ಹೆಚ್ಚು ಪ್ರಭಾವಶಾಲಿಯಾಗುತ್ತಿರುವುದನ್ನು ತೋರಿಸುತ್ತದೆ. ಈ ಹಿಂದೆ ಮಹಿಳಾ ಸುಧಾರಣಾ ಆಯೋಗದ ಪ್ರಸ್ತಾವನೆಗಳನ್ನು ಜಾರಿಗೊಳಿಸದಂತೆ ಇದೇ ಗುಂಪುಗಳು ಸರ್ಕಾರಕ್ಕೆ ಬೆದರಿಕೆ ಹಾಕಿದ್ದವು. ಇತ್ತೀಚೆಗೆ ಇಸ್ಕಾನ್ ಅನ್ನು ‘ಉಗ್ರಗಾಮಿ ಸಂಘಟನೆ’ ಎಂದು ಕರೆದು ನಿಷೇಧಿಸುವಂತೆ ಒತ್ತಾಯಿಸಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಸೀರಿಯಲ್ ನಟಿಯರಿಗೆ ನಿಲ್ಲದ ಕಿರುಕುಳ | ಅಶ್ಲೀಲ ವಿಡಿಯೋ ಕಳಿಸಿ ವಿಕೃತಿ ಮೆರೆದ ಕಾಮುಕ



















