ಬೆಂಗಳೂರು: ಶ್ರೀಕೃಷ್ಣ ಆರ್ಟ್ಸ್ ಮತ್ತು ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ “ಯುದ್ಧಕಾಂಡ” ಚಿತ್ರ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಈ ವಿಷಯವಾಗಿ ಸುದ್ದಿಗೋಷ್ಠಿ ನಡೆಯಿತು. ನಟ ಅಜಯ್ ರಾವ್ ಮಾತನಾಡಿ, “ಯುದ್ಧಕಾಂಡ” ಪ್ರತಿಯೊಬ್ಬ ಮಹಿಳೆಯು ನೋಡಲೇ ಬೇಕಾದ ಚಿತ್ರ. ಮಹಿಳೆಯರ ಮೇಲೆ ಯಾವ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ ಎಂದು ತೋರಿಸುತ್ತಿರುವ ಚಿತ್ರವೂ ಹೌದು. ನೊಂದ ಮಹಿಳೆಯರನ್ನು ಪ್ರತಿನಿಧಿಸುವ ಪಾತ್ರವನ್ನು ಅರ್ಚನಾ ಜೋಯಿಸ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಪವನ್ ಭಟ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಟಿ.ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ.
ಬೇಬಿ ರಾದ್ನ್ಯ ಸಹ ಈ ಚಿತ್ರದಲ್ಲಿದ್ದಾರೆ. ಇದೊಂದು ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದೆ. “ಯುದ್ಧ ಕಾಂಡ” ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ ಸಂದೇಶವಿರುವ ಈ ಚಿತ್ರವನ್ನು ರಾಷ್ಟ್ರಪತಿಗಳಿಗೂ ತೋರಿಸುವ ಯೋಚನೆ ಇದೆ. ಏಪ್ರಿಲ್ 18 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು.

“ಯುದ್ಧ ಕಾಂಡ” 2022ರಲ್ಲೇ ಬರೆದ ಕಥೆ. ಈ ಕಥೆಯಲ್ಲಿ ಎಲ್ಲಾ ಪಾತ್ರಗಳು ಪ್ರಮುಖ ಪಾತ್ರಗಳೆ. ಈ ರೀತಿ ಕಥೆಯನ್ನು ನಿರ್ಮಾಪಕರು ಒಪ್ಪುತ್ತಾರೊ, ಇಲ್ಲವೊ? ಎಂಬ ಸಂಶಯದಿಂದ ಕಥೆ ಯಾರಿಗೂ ಹೇಳಿರಲಿಲ್ಲ. ಅನಂತರ ಕಥೆ ಕೇಳಿದ ಅಜೇಯ್ ರಾವ್ ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರಕಥೆ ಕೂಡ ಅಜೇಯ್ ರಾವ್ ಅವರದೆ. ಇನ್ನು, ಇದೊಂದು ಕೋರ್ಟ್ ರೂಮ್ ಡ್ರಾಮ. ನಾಗಾಭರಣ, ಪ್ರಕಾಶ್ ಬೆಳವಾಡಿ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕಾರ್ತಿಕ್ ಶರ್ಮ ಛಾಯಾಗ್ರಹಣ, ಹೇಮಂತ್ ಜೋಯಿಸ್,ಕೆ ಬಿ ಪ್ರವೀಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ “ಯುದ್ಧ ಕಾಂಡ” ಚಿತ್ರಕ್ಕಿದೆ ಎಂದರು ನಿರ್ದೇಶಕ ಪವನ್ ಭಟ್ ಹೇಳಿದರು. “ಯುದ್ಧಕಾಂಡ” ಚಿತ್ರದಲ್ಲಿ ಅನ್ಯಾಯದಿಂದ ನೊಂದ ಹೆಣ್ಣನ್ನು ಪ್ರತಿನಿಧಿಸುವ ಪಾತ್ರ ನನ್ನದು . ಪವನ್ ಭಟ್ ಅವರ ಕಥೆ ಚೆನ್ನಾಗಿದೆ ಎಂದು ನಟಿ ಅರ್ಚನಾ ಜೋಯಿಸ್ ಹೇಳಿದರು.
ನ್ಯಾಯಾಧೀಶರ ಪಾತ್ರದಲ್ಲಿ ಅಭಿನಯಿಸಿರುವುದಾಗಿ ತಮ್ಮ ಪಾತ್ರದ ಬಗ್ಗೆ ವಿವರಿಸಿದ ಟಿ.ಎಸ್ ನಾಗಾಭರಣ, “ಯುದ್ಧ ಕಾಂಡ” ಎಲ್ಲರಿಗೂ ಪ್ರಿಯವಾಗುವ ಚಿತ್ರವಾಗಲಿದೆ ಎಂಬ ಭರವಸೆ ನಮ್ಮ ತಂಡಕ್ಕಿದೆ ಎಂದರು.
ನಾನು ಹೆಚ್ಚಾಗಿ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಅಜೇಯ್ ರಾವ್ ಅವರು ಈ ಚಿತ್ರದ ಕಥೆ ಬಗ್ಗೆ ಹೇಳಿದಾಗ ನಟಿಸಲು ಒಪ್ಪಿಕೊಂಡೆ. ನನ್ನದು ಈ ಚಿತ್ರದಲ್ಲಿ ವಕೀಲನ ಪಾತ್ರ ಎಂದು ಪ್ರಕಾಶ್ ಬೆಳವಾಡಿ ಹೇಳಿದರು. ಸಂಕಲನಕಾರ ಕ್ರೇಜಿ ಮೈಂಡ್ಸ್ ಮತ್ತು ತಂಡದ ಇತರೆ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.