ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಯುವಕನ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಶನಿವಾರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಮಾಕ್ಷಿಪಾಳ್ಯ (Kamakshipalya) ಠಾಣಾ ವ್ಯಾಪ್ತಿಯಲ್ಲಿ ನಾಗೇಶ್ ಕೊಂಡ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ಗಾಯಾಳುವನ್ನು ಸ್ಥಳೀಯರ ಸಹಕಾರದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸ ನೀಡಲಾಗುತ್ತಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2022ರಲ್ಲಿ ಹಾಡಹಗಲೇ ಯುವತಿಯ ಮೇಲೆ ಕೂಡ ನಾಗ ಎಂಬಾತ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ. ಈದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ಬೆನ್ನಲ್ಲೇ ಮತ್ತೊಂದು ಇಂತಹ ಘಟನೆ ನಡೆದಿದೆ.
ಆ್ಯಸಿಡ್ ದಾಳಿಯಲ್ಲಿ ನಾಗೇಶ್ ಮುಖ ಸಂಪೂರ್ಣ ಸುಟ್ಟು ಹೋಗಿದೆ. ಮುಖ ಊದಿಕೊಂಡಿದೆ. ಗುಲ್ಬರ್ಗ ಮೂಲದವನಾದ ನಾಗೇಶ್, ಈ ಘಟನೆ ನಡೆಯುತ್ತಿದ್ದಂತೆ ತನ್ನ ರೂಮ್ ಮೇಟ್ ಗೆ ತಿಳಿಸಿದ್ದಾನೆ. ಆತ ಫೋನ್ ನಲ್ಲಿ ಮಾತನಾಡುತ್ತ ಬರುವಾಗ ಯಾರೋ ದುಷ್ಕರ್ಮಿಗಳು ಆಸಿಡ್ ಎರಚಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.