ಮಧ್ಯಪ್ರದೇಶದಲ್ಲಿ ಇನ್ನು ಮುಂದೆ ಯಾರನ್ನೂ “ನಿರುದ್ಯೋಗಿಗಳು” ಎಂದು ಕರೆಯುವುದಿಲ್ಲ. ರಾಜ್ಯದ ಉದ್ಯೋಗ ಪೋರ್ಟಲ್‌ನಲ್ಲಿ ಈ ಪದದ ಬದಲಿಗೆ “ಆಕಾಂಕ್ಷಿ ಯುವಕರು” ಎಂಬ ಹೊಸ ಪದವನ್ನು ಬಳಸಲಾಗುತ್ತಿದೆ. ಈ ಬದಲಾವಣೆಯನ್ನು ಮಧ್ಯಪ್ರದೇಶದ ಕಾರ್ಮಿಕ ಇಲಾಖೆಯು ತನ್ನ ಉದ್ಯೋಗ ಪೋರ್ಟಲ್ ಮತ್ತು ರಾಜ್ಯಾದ್ಯಂತ ಇರುವ ಉದ್ಯೋಗ ಕಚೇರಿಗಳಲ್ಲಿ ಜಾರಿಗೆ ತಂದಿದೆ.
ಈ ನಿರ್ಧಾರದ ವ್ಯಾಪ್ತಿಗೆ ರಾಜ್ಯದಲ್ಲಿ ದಾಖಲಾಗಿರುವ 29.36 ಲಕ್ಷ ಯುವಕರನ್ನು ಒಳಗೊಂಡಿದೆ, ಇದು ಹಿಂದಿನ 26.17 ಲಕ್ಷದಿಂದ ಹೆಚ್ಚಳವಾಗಿದೆ. ಈ ಯುವಕರು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಆದರೆ ಈಗ ಅವರನ್ನು “ನಿರೋದ್ಯೋಗಿಗಳು ” ಎಂದು ಕರೆಯುವ ಬದಲು “ಆಕಾಂಕ್ಷಿ ಯುವಕರು” ಎಂದು ಕರೆಯಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ.
ಈ ಬದಲಾವಣೆಯ ಹಿಂದಿನ ಉದ್ದೇಶವನ್ನು ಮುಖ್ಯಮಂತ್ರಿ ಮೋಹನ್ ಯಾದವ್ ವಿವರಿಸಿದ್ದಾರೆ. ಭಾರತದಂತಹ ದೇಶದಲ್ಲಿ 1.45 ಶತಕೋಟಿ ಜನಸಂಖ್ಯೆ ಇದೆ. ಇಲ್ಲಿ ಸರ್ಕಾರಿ ಉದ್ಯೋಗಗಳ ಪ್ರಮಾಣ ಕೇವಲ ಶೇಕಡಾ 1 ರಷ್ಟು ಮಾತ್ರ ಇದೆ. ದೇಶದ ಅತಿದೊಡ್ಡ ಉದ್ಯೋಗದಾತರಾದ ಸೇನಾ ಪಡೆಗಳಾದ ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗಳು ಕೂಡ ಕೇವಲ 13.5 ಲಕ್ಷ ಜನರಿಗೆ ಉದ್ಯೋಗಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಸರ್ಕಾರಿ ಉದ್ಯೋಗಗಳ ಮೂಲಕ ನಿರುದ್ಯೋಗವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದ್ದರಿಂದ, ರಾಜ್ಯ ಸರ್ಕಾರವು ಯುವಕರನ್ನು ಸ್ವಾವಲಂಬನೆ ಮತ್ತು ಉದ್ಯಮಶೀಲತೆಯ ಮೂಲಕ ಉದ್ಯೋಗಕ್ಕೆ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದೆ. ಈ ಸಂದರ್ಭದಲ್ಲಿ “ಆಕಾಂಕ್ಷಿ ಯುವಕರು” ಎಂಬ ಪದವು ಯುವಕರಲ್ಲಿ ಧನಾತ್ಮಕ ದೃಷ್ಟಿಕೋನವನ್ನು ಮೂಡಿಸುತ್ತದೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿ
ಈ ನಿರ್ಧಾರದ ಬಗ್ಗೆ ಸರ್ಕಾರದಿಂದ ಹೆಚ್ಚಿನ ಮಾಹಿತಿ ನೀಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 2,709 ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿತ್ತು. ಈ ಮೇಳಗಳ ಮೂಲಕ 3.22 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿತ್ತು. ಆದರೆ ಈ ಉದ್ಯೋಗಗಳನ್ನು ಎಷ್ಟು ಜನರು ಸ್ವೀಕರಿಸಿದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ .ಹೆಸರು ಬದಲಾವಣೆ ಎಲ್ಲರಿಗೂ ಒಪ್ಪಿಗೆಯಾಗಿಲ್ಲ. ವಿರೋಧ ಪಕ್ಷಗಳು ಮತ್ತು ಕೆಲವು ಯುವಕರು ಇದನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದು ಕೇವಲ ಒಂದು ಉದ್ಯೋಗ ಸಮಸ್ಯೆಯನ್ನು ಮರೆಮಾಚುವ ತಂತ್ರವಷ್ಟೇ ಎಂದು ಅವರು ಆರೋಪಿಸಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪದಿಂದ ಗಮನ ಬೇರೆಡೆಗೆ ಸೆಳೆಯಲು ಈ ರೀತಿ ಪದ ಬದಲಾವಣೆ ಮಾಡಲಾಗಿದೆ ಎಂದು ರಾಜಕೀಯ ವಿರೋಧಿಗಳು ಹೇಳಿದ್ದಾರೆ.
ರಾಜ್ಯದ ಕೌಶಲ್ಯ ಅಭಿವೃದ್ಧಿ ಸಚಿವರು ಈ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಉದ್ಯೋಗ ಪೋರ್ಟಲ್‌ನಲ್ಲಿ ದಾಖಲಾಗಿರುವ ಸಂಖ್ಯೆಯು ನಿಜವಾದ ನಿರುದ್ಯೋಗಿಗಳ ಲೆಕ್ಕವಲ್ಲ ಅವರು ವಾದಿಸಿದ್ದಾರೆ. ಉದ್ಯೋಗಕ್ಕಾಗಿ ದಾಖಲಾಗಿರುವ ಯುವಕರು ತಮ್ಮ ಭವಿಷ್ಯದಲ್ಲಿ ಏನನ್ನಾದರೂ ಸಾಧಿಸಲು ಬಯಸುವ ಆಕಾಂಕ್ಷೆ ಇರುವವರಾಗಿದ್ದಾರೆ. ಆದ್ದರಿಂದ “ಆಕಾಂಕ್ಷಿ ಯುವಕರು” ಎಂಬ ಪದ ಅವರ ಸ್ಥಿತಿಗೆ ಹೆಚ್ಚು ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.