ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು (India Post) ಇತ್ತೀಚಿನ ವರ್ಷಗಳಲ್ಲಿ ಆಧುನೀಕರಣಗೊಂಡಿದೆ. ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇದು ಕೇವಲ ಪತ್ರ, ಪಾರ್ಸೆಲ್ ಗಳನ್ನು ಕಳುಹಿಸುವ ಸಂಸ್ಥೆಯಾಗಿರದೆ, ಬ್ಯಾಂಕ್ ಆಗಿ, ಹೂಡಿಕೆಯ ಕೇಂದ್ರಸ್ಥಾನವಾಗಿ ಬದಲಾಗಿದೆ. ಇದರ ಬೆನ್ನಲ್ಲೇ, ಅಂಚೆ ಇಲಾಖೆಯು ಜನರ ಪತ್ರಗಳು ಹಾಗೂ ಪಾರ್ಸೆಲ್ ಗಳನ್ನು ಕ್ಷಿಪ್ರವಾಗಿ ಡೆಲಿವರಿ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದೆ.
ಅಂಚೆ ಇಲಾಖೆ ಮೂಲಕ ಯಾವುದೇ ಪತ್ರ, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸೆಲ್ ಡೆಲಿವರಿ ಮಾಡಲು ಸುಮಾರು 3ರಿಂದ 5 ದಿನ ಬೇಕಾಗುತ್ತದೆ. ಆದರೆ, ಕೆಲವೇ ತಿಂಗಳಲ್ಲಿ ಸ್ಪೀಡ್ ಪೋಸ್ಟ್ ಆಗಲಿ, ಪಾರ್ಸೆಲ್ ಆಗಲಿ, ಕೇವಲ 24ರಿಂದ 48 ಗಂಟೆಯೊಳಗೆ ಡೆಲಿವರಿ ಮಾಡುವ ವ್ಯವಸ್ಥೆಯನ್ನು ಅಂಚೆ ಇಲಾಖೆ ಅಳವಡಿಸಿಕೊಳ್ಳಲಿದೆ. ಈ ಕುರಿತು ಕೇಂದ್ರ ಸಂವಹನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಮಾಹಿತಿ ನೀಡಿದ್ದಾರೆ.
“ಸ್ಪೀಡ್ ಪೋಸ್ಟ್ ಹಾಗೂ ಪಾರ್ಸೆಲ್ ಗಳನ್ನು ಕೇವಲ 48 ಗಂಟೆಯೊಳಗೆ ಡೆಲಿವರಿ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. 2026ರ ಜನವರಿಯಿಂದಲೇ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಹಾಗೆಯೇ, ಜನವರಿಯಿಂದಲೇ ಸ್ಪೀಡ್ ಪೋಸ್ಟ್ ಇಂಟರ್ ನ್ಯಾಷನಲ್ ಹಾಗೂ ಡೈರೆಕ್ಟ್ ಲೈನ್ ಸೇವೆಗಳಿಗೂ ಚಾಲನೆ ನೀಡಲಾಗುತ್ತದೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
“ಅಂಚೆ ಇಲಾಖೆಯು ಈಗ ಕೇಂದ್ರ ಸರ್ಕಾರದ ಅನುದಾನದಿಂದ ನಡೆಯುತ್ತಿದೆ. ಆದರೆ, ಇದನ್ನು 2029ರ ವೇಳೆಗೆ ಲಾಭದಾಯಕ ಸಂಸ್ಥೆಯನ್ನಾಗಿ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು” ಎಂದು ಕೂಡ ತಿಳಿಸಿದ್ದಾರೆ. “ಇದರ ಭಾಗವಾಗಿಯೇ, 2026ರಲ್ಲಿ 8 ರೀತಿಯ ಹೊಸ ಸೇವೆಗಳನ್ನು ಪ್ರಾರಂಭಿಸುತ್ತೇವೆ. ಅಂಚೆ ಇಲಾಖೆ ಈಗಾಗಲೇ ಮನೆ ಬಾಗಿಲಿಗೆ ಕೆವೈಸಿ, ಸರ್ಕಾರಿ ಯೋಜನೆಗಳು ಮತ್ತು ಆಧಾರ್ ನಂತಹ ಸೇವೆಗಳನ್ನು ಒದಗಿಸುತ್ತಿದೆ” ಎಂದು ಹೇಳಿದರು.