ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಅಧಿಕಾರ ನೀಡುತ್ತದೆ ಎಂದು ಆರೆಸ್ಸೆಸ್ ಪಥಸಂಚಲನ ವಿರೋಧಿಸಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅಂದು ಆರೆಸ್ಸೆಸ್ ಪಥಸಂಚಲನ ದೊಡ್ಡ ಜಟಾಪಟಿಗೆ ಕಾರಣವಾಗಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಾ ಮಕ್ಕಳು, ಸಮುದಾಯದ ಮನಸ್ಸಿನಲ್ಲಿ ಭಾರತ ಐಕ್ಯತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಪತ್ರದಲ್ಲಿ ಉಲ್ಲೇಖಿಸಿದ್ದರು.
ಆದರೆ, ಈಗ ಯಾವುದೋ ದೇಶದಲ್ಲಿ ಯಾರೋ ಸತ್ತರೆಂದು ನಮ್ಮ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಹಿಂದೂ ಯುವಕ ಪೋಸ್ಟ್ ಹಾಕಿದ್ದಾನೆ ಎಂಬ ಕಾರಣಕ್ಕೆ ಮನೆಗೆ ಹೋಗಿ ಧಮ್ಕಿ ಹಾಕಲಾಗಿದೆ. ಇರಾನ್ ಸರ್ವೋಚ್ಚ ನಾಯಕನನ್ನು ಇಸ್ರೇಲ್, ಅಮೆರಿಕ ಜಂಟಿಯಾಗಿ ಹತ್ಯೆ ಮಾಡಿದರೆ, ದೂರದ ಭಾರತದಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕ ಕೂಡ ಈ ಪ್ರತಿಭಟನೆಗಳಿಂದ ಹೊರತಾಗಿಲ್ಲ. ಹತ್ಯೆಯ ದಿನದಿಂದ ಇಲ್ಲಿಯವರೆಗೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದು ಸಚಿವ ಪ್ರಿಯಾಂಕ್ ಖರ್ಗೆ ಅವರ ಕಣ್ಣಿಗೆ ಕಾಣುತ್ತಿಲ್ಲವೇ? ಏಕೆಂದರೆ ಅನುಮತಿ ಇಲ್ಲದ ಹೋರಾಟ, ಪ್ರತಿಭಟನೆ, ಪ್ರಚೋದನೆಯ ಹೇಳಿಕೆಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಅದನ್ನು ಬಹಿರಂಗವಾಗಿ ಖಂಡಿಸುತ್ತಾರೆ. ಹೀಗಾಗಿಯೇ ಈಗ ಅವರಿಗೆ ಈ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಯಾವುದೋ ದೇಶದಲ್ಲಿ ಯಾರೋ ಸತ್ತರೆಂದು ನಮ್ಮಲ್ಲಿ ಏಕೆ ಪ್ರತಿಭಟನೆ? ಈ ಪ್ರತಿಭಟನೆಗಳು ರಾಜ್ಯದಲ್ಲಿ ಪ್ರಚೋದನೆ ನೀಡುತ್ತಿಲ್ಲವೇ? ರಾಜ್ಯದಲ್ಲಿ ನಕಾರಾತ್ಮಕ ಆಲೋಚನೆ ಬಿತ್ತುತ್ತಿಲ್ಲವೇ? ಹಲವೆಡೆ ಖಮೇನಿ ಸಾವು ಖಂಡಿಸಿ, ಗೋಳಾಡಿ ಎದೆ ಎದೆ ಬಡಿದುಕೊಂಡು ಅಳುತ್ತಿದ್ದಾರೆ. ರಸ್ತೆ ಮೇಲೆ ನಿಂತು ಇಸ್ರೇಲ್, ಅಮೆರಿಕ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ. ನಮ್ಮ ಗುರು ಹತ್ಯೆಯಾದ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಕಪ್ಪು ಬಟ್ಟೆ ತೊಟ್ಟು, ಕಪ್ಪು ಬಾವುಟ ಹಿಡಿದು ರಸ್ತೆಗೆ ಬಂದಿದ್ದಾರೆ. ಇದಕ್ಕೆ ಸರ್ಕಾರದ ಅನುಮತಿ ಇತ್ತಾ? ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ಬೇಕು? ಈ ಹೋರಾಟ, ಪ್ರತಿಭಟನೆಗಳಿಗೆ ಅನುಮತಿ ಇಲ್ವಾ? ಇದಕ್ಕೆ ಯಾರು ಉತ್ತರ ನೀಡಬೇಕು ಸಚಿವರೇ?
ಅದೂ ಹೋಗಲಿ, ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮೋದಿ ವಿರುದ್ಧ ಇದೇ ವಿಷಯವಾಗಿ ಆರೋಪಿಸಿದ್ದಾರೆ. ಖಮೇನಿ ಹತ್ಯೆಯಾದರೂ ಪ್ರಧಾನಿ ನರೇಂದ್ರ ಮೋದಿ ಏನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಕೋಮುಗಲಭೆಗೆ ಪ್ರಚೋದನೆ ನೀಡುವುದಿಲ್ವಾ ಹಾಗಾದರೆ? ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಯಾವುದೋ ಒಂದು ಘಟನೆ ನಡೆದರೆ ದೇಶದ ಪ್ರಧಾನ ಮಂತ್ರಿಯಾಗಿರುವವರು ಏಕಾಏಕಿ ಹೇಳಿಕೆಗಳನ್ನು ನೀಡುತ್ತಾರಾ? ರಾಜತಾಂತ್ರಿಕ ವಿಷಯವದಲ್ಲಿ ಇದು ಸರಿನಾ? ಹಾಗಿದ್ದರೂ ಸೋನಿಯಾ ಗಾಂಧಿ ಇಂತಹ ಹೇಳಿಕೆ ನೀಡಿದ್ದೇಕೆ? ಮೋದಿ ಸುಮ್ಮನಿದ್ದಾರೆ ಎಂದು ಹೋರಾಟಗಾರರಿಗೆ ಹೇಳಿದರೆ ಅವರ ಮನಸ್ಸಿನ ಭಾವನೆ ಹೇಗಿರಬಹುದು? ಇದಕ್ಕೆ ಯಾರು ಉತ್ತರ ನೀಡೋರು. ಹಾಗಾದರೆ ಪ್ರಿಯಾಂಕ್ ಖರ್ಗೆ ಸೆಲೆಕ್ಟಿವ್ ಮೈಂಡ್ ಆದರಾ? ಅವರೇ ಉತ್ತರ ನೀಡಬೇಕು.
ಹಿಂದೂ ಸಂಪ್ರದಾಯದ ಹಬ್ಬಗಳಿಗೆ ಸಾಲು ಸಾಲು ರೂಲ್ಸ್ ಗಳನ್ನು ತರುತ್ತಿರುವ ಈ ಸರ್ಕಾರ, ಯಾರೋ ಸತ್ತರು ಅಂತಾ ನಡೆಸುವ ಪ್ರತಿಭಟನೆಗಳಿಗೆ ರೂಲ್ಸ್ ತರುವುದಿಲ್ಲವೇ? ಅಥವಾ ಇವರು ಮೊದಲೇ ಲೆಟರ್ ಹಿಡಿದುಕೊಂಡು ಬಂದು ಫರ್ಮೀಷನ್ ಪಡೆದಿದ್ದಾರೆಯೇ? ಅಥವಾ ಇವರು ನಮ್ಮವರು ಅಂತಾ ಸುಮ್ಮನೆ ಬಿಟ್ರಾ ಹೇಗೆ? ಅದೂ ಹೋಗಲಿ, ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಕೆಲಸ ಕೊಡಿ ಅಂತಾ ಪ್ರತಿಭಟನೆ ಮಾಡಿದರೆ ಕೇವಲ ಎರಡೇ ದಿನಗಳಲ್ಲಿ ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡಿ ಹೋರಾಟ ಸತ್ತು ಹೋಗುವಂತೆ ಮಾಡಲಾಯಿತು. ಆದರೆ, ಖಮೇನಿ ಸತ್ತು ಐದಾರೂ ದಿನ ಕಳೆದರೂ ಹೋರಾಟ, ಗೋಳಾಟ, ಪ್ರತಿಭಟನೆ ಹಾಗೆ ಇವೆ. ಆದರೂ ಸರ್ಕಾರ ಮೌನವಾಗಿರುವುದೇಕೆ? ಈ ಮೂಲಕ ಜನರಿಗೆ ಕೊಡಲು ಹೊರಟಿರುವ ಸಂದೇಶವಾದರೂ ಏನು? ಇವರೆಲ್ಲ ಕಾಂಗ್ರೆಸ್ ದತ್ತು ಪುತ್ರರಾ ಅಂತಾ ಆರೆಸ್ಸೆಸ್ ಜನ ಈಗ ಮಾತನಾಡಿ ಸರ್ಕಾರದ ಮುಂದೆ ಪ್ರಶ್ನೆ ಇಡುತ್ತಿದ್ದಾರೆ. ಇದಕ್ಕೆ ಸರ್ಕಾರ ಅಥವಾ ಪ್ರಿಯಾಂಕ್ ಖರ್ಗೆ ಉತ್ತರ ನೀಡುತ್ತಾರಾ? ನೋಡಬೇಕಿದೆ.
ಇದನ್ನೂ ಓದಿ : ಡಿಕೆಶಿ ಸಿಎಂ ಆಗೋದನ್ನ ತಡೆಯೋಕೆ ನಾನ್ಯಾರು – ಕದಲೂರು ಉದಯ್ ಆರೋಪಕ್ಕೆ ಹೆಚ್‌ಡಿಕೆ ತಿರುಗೇಟು



















