ಬೆಂಗಳೂರು: ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ವೈಟ್ ಫೀಲ್ಡ್‌ನಲ್ಲಿರುವ ಕೋ ಲಿವಿಂಗ್ ಪಿಜಿಯಲ್ಲಿ ನಡೆದಿದೆ.
ಆಂಧ್ರ ಮೂಲದ ಬಾಬು ಚಾಕು ಇರಿದ ಆರೋಪಿ.
ಈತ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಮುದುವೆಯಾಗಿ ಮಗುವಿದೆ. ಆದರೂ ಒಬ್ಬನೇ ಪಿಜಿಯಲ್ಲಿ ವಾಸವಿದ್ದ. ಎರಡು ತಿಂಗಳ ಹಿಂದೆ ಅದೇ ಪಿಜಿಗೆ ಬಂದು ವಾಸವಿದ್ದ ಯುವತಿಯನ್ನು ಆರೋಪಿ ಪರಿಚಯ ಮಾಡಿಕೊಂಡಿದ್ದ. ಆಕೆಯ ಮೊಬೈಲ್ ನಂಬರ್ ಪಡೆದು ಫೋನ್ ಮಾಡಿ ಮಾತನಾಡುತ್ತಿದ್ದನಂತೆ. ಕಳೆದ ಮೂರು ದಿನದ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ, ಆಕೆಯ ಖಾಸಗಿ ಫೋಟೊ ಇಟ್ಟುಕೊಂಡು 70 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರ ಬಳಿ ಸಾಲ ಮಾಡಿ ಕೊಡುವುದಾಗಿ ಯುವತಿ ತಿಳಿಸಿದ್ದಳು. ಬಳಿಕ ಆಕೆಯ ಮೊಬೈಲ್ ಪಡೆದು 14 ಸಾವಿರ ರೂ. ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಗಲಾಟೆ ಮಾಡಿ ಯುವತಿಯ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ವೇಳೆ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.