ತಿರುವನಂತಪುರಂ: ಸಾಮಾಜಿಕ ಜಾಲತಾಣಗಳು ನಮಗೆ ಎಷ್ಟು ಉಪಯುಕ್ತವಾಗಿವೆಯೋ, ಅಷ್ಟೇ ಮಾರಕವೂ ಆಗುತ್ತಿವೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳ ಮಾತು ಕೇಳಿ ಹಣ ಕಳೆದುಕೊಂಡವರಿದ್ದಾರೆ. ಈಗ ಇಂತಹದ್ದೇ ಜಾಲತಾಣದ ಜಾಲಕ್ಕೆ ಸಿಲುಕಿದ ಕೇರಳದ 18 ವರ್ಷದ ಯುವತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹೌದು, ಸೋಷಿಯಲ್ ಮೀಡಿಯಾದಿಂದ ಪ್ರಭಾವಿತಳಾದ ಯುವತಿಯು ತೂಕ ಕಳೆದುಕೊಳ್ಳಲು ಸರಿಯಾಗಿ ಊಟ ಮಾಡುವುದನ್ನೇ ನಿಲ್ಲಿಸಿದ ಯುವತಿಯು ಮೃತಪಟ್ಟಿದ್ದಾಳೆ.
ಥಲಸ್ಸೇರಿಯ 18 ವರ್ಷದ ಯುವತಿಯ ತೂಕ ಜಾಸ್ತಿಯಾಗಿದೆ. ಇದರಿಂದ ಚಿಂತೆಗೀಡಾದ ಆಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೂಕ ಕಳೆದುಕೊಳ್ಳುವ ಕುರಿತು ಇನ್ ಫ್ಲುಯೆನ್ಸರ್ ಗಳು ಮಾತನಾಡಿದ ವಿಡಿಯೊ ನೋಡಿದ್ದಾಳೆ. ಅವರು ಹೇಳಿದ್ದೇ ನಿಜವೆಂದು ಭಾವಿಸಿದ ಯುವತಿಯು ಕಳೆದ ಆರು ತಿಂಗಳಿಂದ ಸರಿಯಾಗಿ ಊಟವನ್ನೇ ಮಾಡಿಲ್ಲ. ಡಯಟ್ ಹೆಸರಿನಲ್ಲಿ ಆಕೆ ಊಟ ಬಿಟ್ಟು, ಬರೀ ಬಿಸಿ ನೀರು ಸೇವಿಸಿದ ಯುವತಿ ಈಗ ಅನಾರೋಗ್ಯದಿಂದ ಸಾವಿಗೀಡಾಗಿದ್ದಾಳೆ.
ಊಟ ಬಿಟ್ಟ ಕಾರಣ ಯುವತಿಯ ಆರೋಗ್ಯ ದಿನೇದಿನೆ ಬಿಗಡಾಯಿಸಿದೆ. ಪೋಷಕರು ಆಕೆಯನ್ನು ಥಲಸ್ಸೇರಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 12 ದಿನಗಳವರೆಗೆ ಐಸಿಯುನಲ್ಲಿದ್ದ ಯುವತಿಯು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಡಯಟ್, ಆಹಾರ ಪದ್ಧತಿ ಕುರಿತು ಹೇಳುವವರ ಬಗ್ಗೆ ಇನ್ನಾದರೂ ಜನ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

“ಯುವತಿಯು ಊಟ ಮಾಡುವುದನ್ನೇ ನಿಲ್ಲಿಸಿದ್ದಾಳೆ. ಹಾಗಾಗಿ ಆಕೆಯ ತೂಕ 24 ಕೆ.ಜಿಗೆ ಇಳಿದಿದೆ. ಆದರೆ, ದಿನೇದಿನೆ ಆಕೆಯ ಆರೋಗ್ಯ ಹದಗೆಟ್ಟಿದೆ. ಶುಗರ್ ಲೆವೆಲ್, ರಕ್ತದೊತ್ತಡ ವಿಪರೀತವಾಗಿ ಕಡಿಮೆಯಾಗಿದೆ. ವೆಂಟಿಲೇಟರ್ ಅಳವಡಿಸಿದರೂ ಆಕೆಯ ಆರೋಗ್ಯದಲ್ಲಿ ಸ್ವಲ್ಪವೂ ಚೇತರಿಕೆಯಾಗಲಿಲ್ಲ” ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಸರಿಯಾಗಿ ಊಟ ಮಾಡದಿರುವುದನ್ನು ಆಕೆಯು ಪೋಷಕರಿಗೂ ತಿಳಿಸಿಲ್ಲ. ಬರೀ ಬಿಸಿ ನೀರು ಕುಡಿದೇ ದಿನಗಳನ್ನು ದೂಡಿದ್ದಾಳೆ ಎಂದು ತಿಳಿದುಬಂದಿದೆ.