ಮಂಗಳೂರು: ಮದುವೆ ಆಗುವಂತೆ ಪೀಡಿಸಿ ಪ್ರೇಯಸಿಗೆ ಪಾಗಲ್ ಪ್ರೇಮಿ ಚೂರಿಯಿಂದ ಇರಿದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬಂಟ್ವಾಳದ ಫರಂಗಿ ಪೇಟೆಯಲ್ಲಿ ಈ ಘಟನೆ ನಡೆದಿದೆ. ಪಾಗಲ್ ಪ್ರೇಮಿ, ಯುವತಿಗೆ ಚಾಕು ಇರಿದು ಸಾವನ್ನಪ್ಪಿದ್ದಾಳೆಂದು ಭಾವಿಸಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯಲ್ಲಿ ಯುವತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಧೀರ್ ಆತ್ಮಹತ್ಯೆ ಮಾಡಿಕೊಂಡ ಯುವಕ, ದಿವ್ಯಾ ಗಾಯಗೊಂಡ ಯುವತಿ. ಸುಧೀರ್ ಹಾಗೂ ದಿವ್ಯಾ ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಇದೇ ವಿಚಾರವಾಗಿ ಇಂದು ಫರಂಗಿಪೇಟೆಯಲ್ಲಿ ಜಗಳವಾಡಿದ್ದ ಸುಧೀಪ್, ದಿವ್ಯಾಳಿಗೆ ಚೂರಿಯಿಂದ ಇರಿದಿದ್ದಾನೆ. ಈ ವೇಳೆ ತಪ್ಪಿಸಿಕೊಂಡು ಹೋಗಿ ಬಿದ್ದಾಗ, ಆಕೆ ಮೃತ ಪಟ್ಟಿದ್ದಾಳೆಂದು ಸುಧೀರ್ ಭಾವಿಸಿದ್ದಾನೆ. ನಂತರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸದ್ಯ ದಿವ್ಯಾ ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.