ಬೆಂಗಳೂರು: ಯುವತಿಯೊಬ್ಬಳು ತನ್ನ ಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಕೆ.ಜಿ. ಶ್ರೀನಿವಾಸಪುರ ಗ್ರಾಮದ ಬಳಿ ನಡೆದಿದೆ.
ಯಶಸ್ವಿನಿ (22) ಮೃತ ಯುವತಿ . ಅವರು ಕಳೆದ ಐದು ತಿಂಗಳಿಂದ ದೊಡ್ಡಬಳ್ಳಾಪುರದಲ್ಲಿರುವ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸಾಮಾನ್ಯ ಜೀವನ ನಡೆಸುತ್ತಿದ್ದ ಯುವತಿ ಇಂತಹ ಕಠಿಣ ನಿರ್ಧಾರಕ್ಕೆ ಏಕೆ ಮುಂದಾದರು ಎಂಬುದು ಇದೀಗ ಪ್ರಶ್ನೆಯಾಗಿದೆ.
ಮಾಹಿತಿ ಪ್ರಕಾರ, ಯಶಸ್ವಿನಿ ಮನೆಯಿಂದ ಹೊರಗೆ ಇರುವ ಸ್ನಾನದ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ತೀವ್ರವಾಗಿ ಹೊತ್ತಿಕೊಂಡಿದ್ದರಿಂದ ಅವರು ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ದುರ್ಘಟನೆ ಕಂಡು ಕುಟುಂಬಸ್ಥರು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಈ ಘಟನೆಯ ಮುನ್ನ ಯಶಸ್ವಿನಿ ದಾಬಸ್ ಪೇಟೆಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿದ್ದಾಳೆ ಎಂಬುದು ತಿಳಿದುಬಂದಿದೆ. ಪೆಟ್ರೋಲ್ ಖರೀದಿಸಿದ ದೃಶ್ಯಗಳು ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆ – ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ!


















