ಬೆಂಗಳೂರು: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಯುವತಿಯ ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆ ನಗರದ ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು.
ಗೀತಾ ಭೀಕರ ಕೃತ್ಯಕ್ಕೆ ಒಳಗಾದ ಮಹಿಳೆ. ಡಿ. 23ರಂದು ನಡೆದ ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಂಗಳವಾರ ರಾತ್ರಿ ಚಿಕಿತ್ಸೆ ಫಲಿಸದೆ ಗೀತಾ ಕೊನೆಯುಸಿರೆಳೆದಿದ್ದಾರೆ.
ಗೀತಾ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದು, ಅದೇ ಪ್ರದೇಶದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದ ಮುತ್ತು ಎಂಬ ಯುವಕನೊಂದಿಗೆ ಸಲುಗೆಯಿಂದಿದ್ದರು. ಒಬ್ಬರಿಗೊಬ್ಬರು ಪರಿಚಯವಾದ ಬಳಿಕ, ಗೀತಾ, ಆಕೆಯ 19 ವರ್ಷದ ಮಗಳು ಹಾಗೂ ಮುತ್ತು ಒಂದೇ ಮನೆಯಲ್ಲಿ ವಾಸವಿದ್ದರು. ಈ ವೇಳೆ ಯುವತಿಯನ್ನು ಮದುವೆ ಮಾಡಿಕೊಡುವಂತೆ ಮುತ್ತು ಗೀತಾಳ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿತ್ತು. ಆದರೆ ಗೀತಾ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡ ಗೀತಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು. ಅತ್ತ ಶೇ.50ಕ್ಕಿಂತ ಹೆಚ್ಚು ಸುಟ್ಟಗಾಯಗಳಿಂದ ಬಳಲುತ್ತಿದ್ದ ಗೀತಾ, 20 ದಿನಗಳ ಕಾಲ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಪೊಲೀಸರು ಕೊಲೆಯತ್ನ ಪ್ರಕರಣವನ್ನು ಕೊಲೆ ಕೇಸ್ ಆಗಿ ಪರಿವರ್ತಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ; ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು | ಇಬ್ಬರು ಸಜೀವ ದಹನ


















