ಬೆಂಗಳೂರು: ತೆಲುಗಿನ ನಟ ಡಾ. ಮೋಹನ್ ಬಾಬು ನಿರ್ಮಿಸಿರುವ ‘ಕಣ್ಣಪ್ಪ’ ಚಿತ್ರವು ಏ. 25ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ತಾಂತ್ರಿಕ ಕೆಲಸಗಳು ವಿಳಂಬವಾದ್ದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಚಿತ್ರ ತಂಡವು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಜೂನ್ 27ರಂದು ಜಗತ್ತಿನಾದ್ಯಂತ ಪ್ಯಾನ್ ಇಂಡಿಯಾ ಚಿತ್ರವಾಗಿ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
‘ಕಣ್ಣಪ್ಪ’ ಚಿತ್ರವು ಡಾ. ಮೋಹನ್ ಬಾಬು ಮತ್ತು ಅವರ ಮಗ ವಿಷ್ಣು ಮಂಚು ಅವರ ಕನಸಿನ ಕೂಸಾಗಿದೆ. ಹೀಗಾಗಿ ಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಹಾಗೆ ನಿಲುಕಲಿದೆ ಎಂದು ಚಿತ್ರತಂಡ ನಂಬಿದೆ. ಈಗ ಈ ಚಿತ್ರಕ್ಕೆ ಶುಕ್ರವಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ದಿನಾಂಕವನ್ನು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಮೋಹನ್ ಬಾಬು, ವಿಷ್ಣು ಮಂಚು, ಪ್ರಭುದೇವ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ವಿನಯ್ ಮಹೇಶ್ವರಿ ಹಾಜರಿದ್ದರು.

ಚಿತ್ರ ಯಶಸ್ವಿಯಾಗಲೆಂದು ಹಾರೈಸಿರುವ ಯೋಗಿ ಆದಿತ್ಯನಾಥ್, ಚಿತ್ರವು ದೇಶಾದ್ಯಂತ ಜನರಿಗೆ ಇಷ್ಟವಾಗಲಿದೆ ಎಂದು ನಂಬಿಕೆ ವ್ಯಕ್ತಪಡಿಸಿದ್ದಾರೆ. ಆದಿತ್ಯನಾಥ್ ಅವರ ಶುಭ ಹಾರೈಕೆಗಳಿಂದ ಚಿತ್ರತಂಡ ಖುಷಿಯಾಗಿದ್ದು, ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಎ.ವಿ.ಎ. ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಅಡಿ ಡಾ. ಮೋಹನ್ ಬಾಬು ನಿರ್ಮಿಸಿರುವ ‘ಕಣ್ಣಪ್ಪ’ ಚಿತ್ರವನ್ನು ಮುಕೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ‘ಕಣ್ಣಪ್ಪ’ ಚಿತ್ರದಲ್ಲಿ ಶಿವಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಿದ್ದು, ಡಾ. ಮೋಹನ್ ಬಾಬು, ಶರತ್ ಕುಮಾರ್, ಮಧು, ದೇವರಾಜ್, ಮುಕೇಶ್ ರಿಶಿ, ಬ್ರಹ್ಮಾನಂದಂ ಸೇರಿದಂತೆ ಹಲವರು ನಟಿಸಿದ್ದು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್ ಅಗರ್ವಾಲ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸ್ಟೀಫನ್ ದೇವಸ್ಸಿ ಸಂಗೀತವಿದ್ದು, ಶೆಲ್ಡನ್ ಚಾವ್ ಅವರ ಛಾಯಾಗ್ರಹಣವಿದೆ.