ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದ ಐತಿಹಾಸಿಕ ಮಹಾ ಕುಂಭಮೇಳವು (Maha Kumbh 2025) ಸಂಪನ್ನಗೊಂಡಿದೆ. ವಿಶ್ವದ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ 66 ಕೋಟಿ ಜನ ಭೇಟಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಇದರ ಬೆನ್ನಲ್ಲೇ, ಮಹಾ ಕುಂಭಮೇಳದಿಂದ 3.5 ಲಕ್ಷ ಕೋಟಿ ರೂಪಾಯಿ ಆದಾಯ ಹೇಗೆ ಸೃಷ್ಟಿಯಾಯಿತು ಎಂಬುದರ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಮಹಾ ಕುಂಭಮೇಳದ ಯಶಸ್ಸಿನ ಕುರಿತು ಸಂಪೂರ್ಣ ಮಾಹಿತಿ ನೀಡಿದರು. “ಮಹಾ ಕುಂಭಮೇಳದಿಂದ 3.5 ಲಕ್ಷ ಕೋಟಿ ರೂ. ಆದಾಯ ಸೃಷ್ಟಿಯಾಗಿದೆ. ಕುಂಭಮೇಳದ ಕೇವಲ 130 ಬೋಟ್ ಗಳಿಂದಲೇ 30 ಕೋಟಿ ರೂ. ಆದಾಯ ಸೃಷ್ಟಿಯಾಗಿದೆ. ಪ್ರತಿಯೊಂದು ಬೋಟ್ ಕೂಡ ಸರಾಸರಿ 23 ಲಕ್ಷ ರೂ. ದುಡಿದಿದೆ. ಇದರಿಂದ ಬೋಟ್ ಮಾಲೀಕರು ಹೆಚ್ಚು ಹಣ ಗಳಿಸಲು ಸಾಧ್ಯವಾಗಿದೆ” ಎಂದು ತಿಳಿಸಿದರು.

“ಮಹಾ ಕುಂಭಮೇಳಕ್ಕೆ ರಾಜ್ಯ ಸರ್ಕಾರವು 7,500 ಕೋಟಿ ರೂ. ಹೂಡಿಕೆ ಮಾಡಿತು. ಇದರಿಂದ 3.5 ಲಕ್ಷ ಕೋಟಿ ರೂ. ಆದಾಯ ಸೃಷ್ಟಿಯಾಯಿತು. ಸಾರಿಗೆಯಿಂದ 1.5 ಲಕ್ಷ ಕೋಟಿ ರೂ. ಆದಾಯ ಸೃಷ್ಟಿಯಾದರೆ, ಹೋಟೆಲ್ ಉದ್ಯಮವು 40 ಸಾವಿರ ಕೋಟಿ ರೂ., ಆಹಾರ ಮತ್ತು ದಿನಬಳಕೆ ವಸ್ತುಗಳ ವಲಯದಲ್ಲಿ 33 ಸಾವಿರ ಕೋಟಿ ರೂ. ಆದಾಯ ಸೃಷ್ಟಿಯಾಗಿದೆ” ಎಂದು ಲೆಕ್ಕ ನೀಡಿದರು.
“ಇತರೆ ವಲಯಗಳಿಂದ ಒಟ್ಟು 66 ಸಾವಿರ ಕೋಟಿ ರೂ. ಆದಾಯ ಸೃಷ್ಟಿಯಾಗಿದೆ. 600 ಕೋಟಿ ರೂ. ದೇಣಿಗೆ ಮೂಲಕ ಸಂಗ್ರಹವಾಗಿದೆ. 300 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ” ಎಂದು ವಿಧಾನಸಭೆಯಲ್ಲಿ ತಿಳಿಸಿದರು. ಫೆಬ್ರವರಿ 26ರ ಮಹಾ ಶಿವರಾತ್ರಿಯಂದು ಮಹಾ ಕುಂಭಮೇಳವು ಸಂಪನ್ನಗೊಂಡಿದೆ.