ಮುಂಬೈ: 1948ರಲ್ಲಿ ಹೈದರಾಬಾದ್ ನಿಜಮರ ರಜಾಕ್ ರು ಬಂದು ಖರ್ಗೆ ಅವರ ಊರು ಸುಟ್ಟಿದ್ದರು. ಆಗ ಖರ್ಗೆಯವರ ತಾಯಿ, ಸಹೋದರಿ ಸುಟ್ಟು ಕರಕಲಾಗಿದ್ದರು. ಹೀಗಾಗಿ ಬಾಲ್ಯದ ನೋವು ಮರೆಯಬೇಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಖರ್ಗೆ ಅವರಿಗೆ ಕಿವಿ ಮಾತು ಹೇಳಿದ್ದಾರೆ.
ಖರ್ಗೆಯವರ ಬಾಲ್ಯದ ದುರಂತವನ್ನು ನೆನಪಿಸಿದ ಯೋಗಿ ಆದಿತ್ಯನಾಥ್, “ಬಟೇಂಗೆ ತೋ ಕಟೇಂಗೆ (ವಿಭಜಿಸಿದರೆ ನಾವು ನಾಶವಾಗುತ್ತೇವೆ)” ಎಂಬ ಘೋಷಣೆಯ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ. “ನಾನು ಯೋಗಿ, ನನಗೆ ರಾಷ್ಟ್ರವೇ ಮೊದಲು. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ತುಷ್ಟೀಕರಣದ ರಾಜಕೀಯ ಮೊದಲು ಎಂದು ಗುಡುಗಿದ್ದಾರೆ.
ಖರ್ಗೆಯವರು ನಿಜಾಮರ ಆಳ್ವಿಕೆಯ ಹಿಂದಿನ ಹೈದರಾಬಾದ್ ರಾಜ್ಯದ ಬೀದರ್ ಪ್ರದೇಶದಲ್ಲಿ ಜನಿಸಿದರು. ಖರ್ಗೆಯವರ ಗ್ರಾಮವಾದ ವಾರ್ವಟ್ಟಿ ಹೈದರಾಬಾದ್‌ನ ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. ಆಗ ಬ್ರಿಟಿಷರು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ನ್ನು ಪ್ರೋತ್ಸಾಹಿಸಿದರು. ಕಾಂಗ್ರೆಸ್ ಕೂಡ ಅದಕ್ಕೆ ಬೆಂಬಲ ನೀಡಿತು. ಸ್ವಾತಂತ್ರ್ಯದ ನಂತರ ನಿಜಾಮರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದ್ದರಿಂದ ಹಿಂಸಾಚಾರ ಆರಂಭವಾಗಿ, ನಿಜಾಮರು ಖರ್ಗೆಯವರ ಗ್ರಾಮವನ್ನು ಸುಟ್ಟುಹಾಕಿದರು. ಅಲ್ಲಿನ ಹಿಂದೂಗಳನ್ನು ಬರ್ಬರವಾಗಿ ಕೊಂದರು. ಆ ವೇಳೆ ಮಲ್ಲಿಕಾರ್ಜುನ ಖರ್ಗೆಯವರ ತಾಯಿ, ಸಹೋದರಿ, ಅವರ ಕುಟುಂಬದ ಸದಸ್ಯರು ಸುಟ್ಟು ಹೋದರು. ತಮ್ಮ ಕುಟುಂಬಸ್ಥರು ಮಾಡಿದ ಪ್ರಾಣತ್ಯಾಗವನ್ನೇ ಮರೆತು ಮುಸ್ಲಿಮರ ಮತಕ್ಕಾಗಿ ಖರ್ಗೆ ವಾದ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.