ರಾಮನಗರ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದೆ. ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ಸುತ್ತಾಡಿ ಮತ ಯಾಚಿಸಿದ್ದಾರೆ. ವಿರೋಧಿಗಳು ಪರಸ್ಪರ ಆರೋಪ -ಪ್ರತ್ಯಾರೋಪ ಮಾಡಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ತಮ್ಮ ವ್ಯಕ್ತಿಗೆ ಮತ ಹಾಕುವಂತೆ ಬೀದಿ ಬೀದಿ ಸುತ್ತಿದ್ದಾರೆ. ಈ ಮಧ್ಯೆ ಪ್ರತಿಷ್ಠಿತ ಕಣವಾಗಿರುವ ಚನ್ನಪಟ್ಟಣದಲ್ಲಿ ತಂಗೆ ಮತ ಹಾಕದೆ ಮಗಳು ದೂರು ಉಳಿದಿದ್ದಾರೆ.
ಇಂದು ಚನ್ನಪಟ್ಟಣ (Channapatna), ಶಿಗ್ಗಾಂವಿ (Shiggaon), ಸಂಡೂರು (Sandur) ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಈ ಮೂರು ಕ್ಷೇತ್ರಗಳಲ್ಲಿ ಚನ್ನಪಟ್ಟಣ ಪ್ರತಿಷ್ಠಿತ ಕಣ. ಕಾಂಗ್ರೆಸ್ ನಿಂದ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಆದರೆ, ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಮತದಾನದಿಂದ ದೂರ ಸರಿದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆ ಮತ ಹಾಕಲು ಮಗಳು ನಿರಾಕರಿಸಿದ್ದಾರೆ. ಈ ಸಂದೇಶವನ್ನು ಸಾಮಾಜಿಕ ಜಾಲತಾಣದ ಮೂಲಕ ನಿಶಾ ಹೇಳಿದ್ದಾರೆ. ನನ್ನ ಮೂಲಭೂತ ಹಕ್ಕುಗಳನ್ನ ಕಿತ್ತುಕೊಂಡಿದ್ದಾರೆ. ಇನ್ನು ಯಾವ ಹಕ್ಕನ್ನು ಪಡೆಯಲು ಮತದಾನ ಮಾಡಬೇಕು? ಪ್ರತಿಬಾರಿ ಚಕ್ಕೆರೆಯಲ್ಲಿ ಮತದಾನ ಮಾಡುತ್ತಿದ್ದೆ. ಆದರೆ ಈ ಬಾರಿ ನಾನು ಮತದಾನ ಮಾಡಲ್ಲ ಎಂದು ಹೇಳಿದ್ದಾರೆ.
ನಿಶಾ ಯೋಗೇಶ್ವರ್ ಅ. 26ರಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಡಿಕೆ ಶಿವಕುಮಾರ್ ಸರ್, ನನ್ನ ಸಿಡಿ ನಿಮ್ಮ ಬಳಿ ಇದ್ರೆ ಅದನ್ನು ಧೈರ್ಯವಾಗಿ ಬಿಡುಗಡೆ ಮಾಡಿ ಎಂದು ಸವಾಲು ಎಸೆದಿದ್ದರು. ಡಿಕೆ ಶಿವಕುಮಾರ್ ಅವರು ನನ್ನ ಸಿಡಿ ಇಟ್ಟುಕೊಂಡು ನನ್ನ ತಂದೆಯವರನ್ನು ಬ್ಲಾಕ್ ಮೇಲ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋಗಿದ್ದೀರಂತೆ ಎಂದು ಖಾಸಗಿ ಯೂಟ್ಯೂಬ್ ಚಾನೆಲ್ ಒಂದು ಸುದ್ದಿ ಪ್ರಸಾರ ಮಾಡಿದೆ. ಈ ಕುರಿತು ಡಿಕೆ ಶಿವಕುಮಾರ್ ಸರ್ ಸ್ಪಷ್ಟನೆ ನೀಡಬೇಕು ಕೇಳಿಕೊಂಡಿದ್ದರು.
ಆಗ ಡಿಕೆಶಿ ಇದು ನಿಮ್ಮಬ್ಬರ ಜಗಳ. ತಂದೆ ಹಾಗೂ ಮಗಳ ಜಗಳ. ನೀವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಬುದ್ದಿ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ. ಹೀಗಾಗಿ ನಿಶಾ ಯೋಗೇಶ್ವರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋ ತುಣುಕುಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದ್ದರು. ಈಗ ತಂದೆ ವಿರುದ್ಧ ಮಗಳು ಗುಡುಗಿದ್ದಾರೆ.