ರಾಮನಗರ: ಚನ್ನಪಟ್ಟಣದಲ್ಲಿ ಪ್ರಚಾರದ ಸಂದರ್ಭದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.
ಒಬ್ಬ ವ್ಯಕ್ತಿ ಯುದ್ಧದಲ್ಲಿ ಸೋಲುತ್ತಿರುವಾಗ ಅವನ ಕೊನೆ ಅಸ್ತ್ರವೇ ಕಣ್ಣೀರಾಗಿದೆ. ನಾಯಕ ಜನರ ಕಣ್ಣೀರು ಒರೆಸಬೇಕೇ ವಿನಃ, ಕಣ್ಣೀರು ಹಾಕಬಾರದು ಎಂದು ಕಿಡಿಕಾರಿದ್ದಾರೆ. ನಿಖಿಲ್ ಕುಮಾರಸ್ವಾಮಿ ಈಗ ತಾನೆ ನನ್ನ ತಾಲೂಕಿಗೆ ಬಂದಿದ್ದಾರೆ. ಯಾವುದೇ ಅಭ್ಯರ್ಥಿ ಕಣ್ಣೀರು ಹಾಕಿ ಮತದಾರರ ಮನಸ್ಸು ಗೆಲ್ಲಲು ಆಗಲ್ಲ. ತಂದೆ ಮಾಡಿದ ಅವ್ಯವಸ್ಥೆಗೆ ಸಾವಿರಾರು ಜನ ಕಣ್ಣೀರಾಕುತ್ತಿದ್ದಾರೆ. ಕಣ್ಣೀರಿಡುವುದು ಒಬ್ಬ ನಾಯಕನ ಗುಣವಲ್ಲ ಎಂದು ವಂಗ್ಯವಾಡಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಆಡಳಿತ ದೌರ್ಬಲ್ಯ, ನಿಷ್ಕ್ರಿಯತೆಯಿಂದ ಜನ ಬೇಸತ್ತಿದ್ದಾರೆ. ಅವರು ಸಿಎಂ ಆಗಿದ್ದಾಗ ಒಂದೇ ಒಂದು ಮನೆ ನೀಡಿಲ್ಲ. ಕುಮಾರಸ್ವಾಮಿಯವರು ಮೊದಲು ಪತ್ನಿ ಕರೆದುಕೊಂಡು ಬಂದರು. ಈಗ ಮಗನನ್ನು ಚುನಾವಣೆಗೆ ಕರೆತಂದಿದ್ದಾರೆ ಎಂದಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ನೀರಾವರಿ ಯೋಜನೆಗೆ ಡಿವಿಎಸ್ ಅನುಮತಿ ವಿಚಾರವಾಗಿ ಮಾತನಾಡಿದ್ದು, ಸದಾನಂದಗೌಡರು ಸಿಎಂ ಆಗಿದ್ದಾಗ ಅನುಮೋದನೆ ನೀಡಿದ್ದರು ಅಷ್ಟೇ ಎಂದು ಹೇಳಿದ್ದಾರೆ.