ಬೆಂಗಳೂರು : ಕರ್ನಾಟಕ ಸರ್ಕಾರವು ಯಶಸ್ವಿನಿ ಯೋಜನೆ ಜಾರಿಗೊಳಿಸಿದ್ದು, 5 ಲಕ್ಷ ರೂಪಾಯಿವರೆಗೆ ಕ್ಯಾಶ್ ಲೆಸ್ ಚಿಕಿತ್ಸೆಗೆ ನೆರವಾಗುತ್ತದೆ. ಅದರಲ್ಲೂ, ರಾಜ್ಯದ ಸಹಕಾರ ಸಂಘಗಳ ಸದಸ್ಯರಿಗೆ ವಿಮಾ ಸುರಕ್ಷತೆ ನೀಡುವ ದೃಷ್ಟಿಯಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈಗ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ಯೋಜನೆಯನ್ನು ಮುಂದುವರಿಸಲು ಮಾರ್ಚ್ 31ರ ಗಡುವು ನೀಡಲಾಗಿದೆ. ಹಾಗಾಗಿ, ಅರ್ಹರು ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯ ಪಡೆಯಬಹುದಾಗಿದೆ.
ಕರ್ನಾಟಕದ ಯಾವುದೇ ಸಹಕಾರ ಸಂಘದಲ್ಲಿ ಕನಿಷ್ಠ 90 ದಿನಗಳಿಂದ ಸದಸ್ಯರಾಗಿರುವವರು ಯಶಸ್ವಿನಿ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ನಿಮ್ಮ ಹತ್ತಿರದ ಸಹಕಾರ ಸಂಘ, ಸಹಕಾರಿ ಬ್ಯಾಂಕ್ ಗಳು ಅಥವಾ ವಿಎಸ್ಎಸ್ಎನ್ (VSSN) ಬ್ಯಾಂಕ್ ಗಳಲ್ಲಿ ಅರ್ಜಿ ಸಲ್ಲಿಸಬಹುದು. ಯೋಜನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು https://sahakarasindhu.karnataka.gov.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ಏನೆಲ್ಲ ಇವೆ ಸೌಲಭ್ಯಗಳು?
ನಗದು ರಹಿತ ಚಿಕಿತ್ಸೆ (Cashless): ಗುರುತಿಸಲಾದ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಕಾರ್ಡ್ ತೋರಿಸಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.
ಚಿಕಿತ್ಸಾ ಮಿತಿ: ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷ ರೂಪಾಯಿವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಚಿಕಿತ್ಸೆಗಳ ಸಂಖ್ಯೆ: ಸುಮಾರು 1,650ಕ್ಕೂ ಹೆಚ್ಚು ಕಾಯಿಲೆಗಳಿಗೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ (Surgeries) ಯೋಜನೆ ಅಡಿಯಲ್ಲಿ ಅವಕಾಶವಿದೆ. ಒಳರೋಗಿ ಮತ್ತು ಹೊರರೋಗಿ ಚಿಕಿತ್ಸೆ: ಶಸ್ತ್ರಚಿಕಿತ್ಸೆಗಳ ಜತೆಗೆ ಡಯಾಗ್ನೋಸ್ಟಿಕ್ ಪರೀಕ್ಷೆಗಳಿಗೂ ರಿಯಾಯಿತಿ ದರವಿರುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 500 ರೂಪಾಯಿ ಪ್ರೀಮಿಯಂ ಕಟ್ಟಬೇಕಾಗುತ್ತದೆ. ನಗರ ಪ್ರದೇಶಗಳ ಸದಸ್ಯರಿಗೆ 1 ಸಾವಿರ ರೂಪಾಯಿ ಪ್ರೀಮಿಯಂ ಇದೆ. ಎಸ್ಸಿ, ಎಸ್ಟಿ ವರ್ಗದವರಿಗೆ ಯಾವುದೇ ಶುಲ್ಕವಿರುವುದಿಲ್ಲ. ಅರ್ಜಿಯ ಜತೆಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಕುಟುಂಬದ ಸದಸ್ಯರ ಫೋಟೋಗಳು, ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ : ಯುದ್ಧದ ಎಫೆಕ್ಟ್.. ಬೆಂಗಳೂರಿನ ರಸ್ತೆ ಕಾಮಗಾರಿಗಳಿಗೆ ಬ್ರೇಕ್!


















