ಬೆಂಗಳೂರು : ಪ್ರಧಾನಿಯವರನ್ನು ಯಾರು ಕರೆಸಿದರು ಎಂಬ ಬಗ್ಗೆ ಉತ್ತರ ಕೊಡಬೇಕಾಗಿಲ್ಲ. ಈವರೆಗೆ ಹಳದಿ ಮಾರ್ಗದ ಬಗ್ಗೆ ಡಿಸಿಎಂ ತಲೆಕೆಡಿಸಿಕೊಂಡಿರಲಿಲ್ಲ. ಪ್ರಧಾನಿ ಬರುವುದು ಖಚಿತ ಆದ ಕೂಡಲೇ ಟೂರ್ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ, ಕೋವಿಡ್ ಸಮಯದಲ್ಲೂ ಮೆಟ್ರೋ ಸಿವಿಲ್ ಕೆಲಸ ಮುಂದುವರಿದಿತ್ತು. ಬಿಎಂಆರ್ ಸಿಎಲ್ ಗೆ ಒಬ್ಬ ಫುಲ್ ಟೈಮ್ ಎಂ.ಡಿ.ಯನ್ನು ನೇಮಕ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಆಗಿರಲಿಲ್ಲ. ನಾನು ಟೀಟಾಘರ್ ಮೆಟ್ರೋ ಬೋಗಿ ತಯಾರಿಕಾ ಘಟಕಕ್ಕೆ ಮೂರು ಬಾರಿ ಭೇಟಿ ಕೊಟ್ಟಿದ್ದೇನೆ. ಮೆಟ್ರೋ ಎಂ.ಡಿ.ಗಳು ಭೇಟಿ ಕೊಟ್ಟಿರಲಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅವರು ಹರಿಹಾಯ್ದಿದ್ದಾರೆ.
ಆರ್ ಸಿಬಿ ಐಪಿಎಲ್ ಗೆದ್ದಾಗ ಕ್ರೆಡಿಟ್ ತೆಗೆದುಕೊಳ್ಳಲು ಬಂದವರು ಮೆಟ್ರೋದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಬರದೇ ಇರುತ್ತಾರೆ. ಆದಷ್ಟು ಬೇಗ ಉದ್ಘಾಟನೆ ಆಗಬೇಕು ಎಂದು ನಮಗೆ ಆತುರ ಇದೆ. ಝೀರೋ ಟ್ರಾಫಿಕ್ ನಲ್ಲಿ ಓಡಾಡುವವರಿಗೆ ಆತುರ ಇರಲು ಸಾಧ್ಯವಿಲ್ಲ. ಕೇಳಿದರೆ ಚಿಕ್ಕ ಹುಡುಗ, ಅರ್ಜೆಂಟ್ ಎಂದು ಹೇಳುತ್ತಾರೆ. ರೋಡ್ ಬೇಗ ಓಪನ್ ಮಾಡಿ ಎಂದು ಕೇಳುವುದೇ ರಾಜ್ಯ ಸರ್ಕಾರಕ್ಕೆ ತಪ್ಪಾಗಿಬಿಟ್ಟಿದೆ ಎಂದು ಕಿಡಿ ಕಾರಿದ್ದಾರೆ.
ಈಜಿಪುರ 2.5 ಕಿ.ಮೀ. ಫ್ಲೈ ಓವರ್ ಎಂಟು ವರ್ಷ ಆದರೂ ಆಗಿಲ್ಲ. ಈಗ ಉಪಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ನೂರು ಕಿ.ಮೀ. ರೋಡ್ ಮಾಡಲು ಹೊರಟಿದ್ದಾರೆ. ಇಂದಿರಾಗಾಂಧಿ ಶಂಕುಸ್ಥಾಪನೆ ಮಾಡಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಉದ್ಘಾಟನೆ ಕಾಲ ಹೊರಟು ಹೋಯಿತು. ಈಗ ಮೋದಿಯವರೇ ಶಂಕುಸ್ಥಾಪನೆ ಮಾಡುತ್ತಾರೆ, ಮೋದಿಯವರೇ ಉದ್ಘಾಟನೆ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ.