ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಈಗಾಗಲೇ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ಬಿಜೆಪಿಯ ನಾಯಕ ಬಿ.ಎಸ್. ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.
ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ನಿನ್ನೆ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ರಾಜ್ಯ ಪ್ರವಾಸದ ಕುರಿತು ಯಡಿಯೂರಪ್ಪ ಘೋಷಿಸಿದ್ದಾರೆ. ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಕೈ ಕಟ್ಟಿ ಕೂರುವ ಮಾತಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಈ ಸರ್ಕಾರ ಕಿತ್ತೊಗೆಯುವವರೆಗೂ ನಾನು ಸುಮ್ಮನೆ ಇರುವುದಿಲ್ಲ ಎಂದು ಗುಡುಗಿದ್ದಾರೆ.
ರಾಜ್ಯ ಪ್ರವಾಸ ಘೋಷಿಸಿದ್ದೇಕೆ ಯಡಿಯೂರಪ್ಪ?
ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲೇಬೇಕಿದೆ. ಈಗಾಗಲೇ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದು, ಮುಂದೆ ಎದುರಾಗಲಿರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಇದಕ್ಕೆ ಪಕ್ಷ ಸಂಘಟನೆ ಮಾಡಲೇಬೇಕು. ಇನ್ನು ಬಿಜೆಪಿಯಲ್ಲಿ ಈಗ ಕಿರಿಯರದ್ದೇ ಕಾರುಬಾರಾಗಿದೆ. ಹಳೆಯ ಬೇರು ಬಿಟ್ಟು ಹೊಸ ಚಿಗುರು, ಚಿಗುರೊಡಲು ಸಾಧ್ಯವೇ ಇಲ್ಲ. ಹೀಗಾಗಿ ಯಡಿಯೂರಪ್ಪ ರಾಜ್ಯ ಪ್ರವಾಸ ಘೋಷಣೆ ಮಾಡಿದ್ದಾರೆ. ನಾನೇ ಬರುತ್ತೇನೆ. ಜನಪರ ಹೋರಾಟ ಮಾಡುತ್ತೇನೆ. ನೀವು ಬನ್ನಿ. ಈ ಸರ್ಕಾರ ಕಿತ್ತೊಗೆಯೋಣ ಎಂದು ಯಡಿಯೂರಪ್ಪ ಕರೆ ಕೊಟ್ಟಿದ್ದಾರೆ.