ಬೆಂಗಳೂರು: ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಂಧನಕ್ಕೆ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ದೊಡ್ಡ ತಲೆನೋವು ಶುರುವಾಗಿದೆ.
ಯಡಿಯೂರಪ್ಪ ಬಂಧನಕ್ಕೆ ಸಿಐಡಿ ಶೋಧ ಕಾರ್ಯ ಶುರುಮಾಡಿದ್ದು, ಮತ್ತೊಂದು ಕಡೆಯಲ್ಲಿ ಬಿಎಸ್‌ವೈ ಬಂಧಿಸಿದರೆ ಸರ್ವನಾಶ ಆಗುತ್ತೀರಿ ಎಂದು ಬಿಜೆಪಿ ಎಚ್ಚರಿಸಿದೆ. ಇನ್ನೊಂದೆಡೆ ಯಡಿಯೂರಪ್ಪ ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ಮಧ್ಯಾಹ್ನ ಅರ್ಜಿಯ ವಿಚಾರಣೆ ನಡೆಯಲಿದೆ.
17 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಕೇಳಿ ಬಂದಿದೆ. ಬಾಲಕಿಯೊಬ್ಬಳು ತನ್ನ ತಾಯಿಯೊಂದಿದೆ ಬಿಎಸ್‌ವೈ ನಿವಾಸಕ್ಕೆ ನ್ಯಾಯ ಕೋರಿ ತೆರಳಿದ್ದಳು. ಸಂದರ್ಭದಲ್ಲಿ ಯಡಿಯೂರಪ್ಪ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತಾದ ವಿಡಿಯೋವನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ದೂರು ನೀಡಿದ ಕೆಲವೇ ದಿನಗಳಲ್ಲಿ ಸಂತ್ರಸ್ತ ಬಾಲಕಿಯ ತಾಯಿ ಸಾವನ್ನಪ್ಪಿದ್ದಾರೆ. ದಿಢೀರ್ ಆಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತಪಡಿಸಿ ಮಹಿಳಾ ಪರ ಸಂಘಟನೆಗಳು ತನಿಖೆಗೆ ಆಗ್ರಹಿಸಿ ದೂರು ನೀಡಿವೆ. ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚನೆ ನೀಡಿತ್ತು. ವಿಚಾರಣೆಗೆ ಹಾಜರಾಗದೆ ದೆಹಲಿಯತ್ತ ಯಡಿಯೂರಪ್ಪ ಪ್ರಯಾಣ ಬೆಳೆಸಿದ್ದರು.
ಪೊಲೀಸ್ ಅಧಿಕಾರಿಗಳು ವಾರಂಟ್ ಜಾರಿಯಾಗುತ್ತಿದ್ದಂತೆ ಅಲರ್ಟ್ ಆಗಿದ್ದು, ಬಿಎಸ್‌ವೈ ಇರುವ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ಶುಕ್ರವಾರ ಹೈಕೋರ್ಟ್‌ನಲ್ಲಿ ವಿಚಾರಣೆಯಾಗಲಿದೆ. ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣ ರದ್ದುಕೋರಿ ಯಡಿಯೂರಪ್ಪ ಸಲ್ಲಿಸಿರುವ ಮತ್ತೊಂದು ಅರ್ಜಿಯೂ ವಿಚಾರಣೆ ನಡೆಯಲಿದೆ.