ತುಮಕೂರು: ಯತ್ನಾಳ್ ಉಚ್ಛಾಟನೆ ಬಹಳ ದಿನಗಳ ಹಿಂದೆಯೇ ಆಗಬೇಕಿತ್ತು. ತಡವಾಗಿ ಆಗಿದೆ ಎಂದು ಯತ್ನಾಳ್ ಉಚ್ಛಾಟನೆಯನ್ನು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಸ್ವಾಗತಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಪಕ್ಷಕ್ಕಿಂತ ಯಾವ ವ್ಯಕ್ತಿಯು ದೊಡ್ಡವನಲ್ಲ. ಪಕ್ಷ ಎಂದರೆ ತಾಯಿ ಸಮಾನ. ಅದು ಆಲದ ಮರ ಇದ್ದ ಹಾಗೆ. ಮರದ ಆಶ್ರಯ ಪಡೆದು, ಆಲದ ಮರವನ್ನೇ ಕಡಿಯಲು ಹೋದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಹೈಕಮಾಂಡ್ ನಿರ್ಧಾರ ಸರಿ ಇದೆ. ಯತ್ನಾಳ್ ಯಾವಾಗಲೂ ವಿಜಯೇಂದ್ರ, ಯಡಿಯೂರಪ್ಪ, ಹೈಕಮಾಂಡ್ ವಿರುದ್ಧ ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರಬೇಕು. ವಿಜೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು, ಹೈಕಮಾಂಡ್. ಹೈಕಮಾಂಡ್ ಆದೇಶವನ್ನೇ ಪಾಲನೆ ಮಾಡಲಿಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ಹೈ ಕಮಾಂಡ್ ಎರಡು ಬಾರಿ ಸೂಚನೆ ಕೊಟ್ಟರೂ ಯತ್ನಾಳ್ ನಿರ್ಲಕ್ಷಿಸಿದ್ದರು. ಬಿಜೆಪಿಯ ಐವರಿಗೆ ನೋಟಿಸ್ ಕೊಟ್ಟಿರುವುದನ್ನು ಕೂಡ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಕರ್ನಾಟಕದಲ್ಲಿ ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೆಚ್ಚು ಕಡಿಮೆಯಾಗಿ 2023ರಲ್ಲಿ ಸೋತಿರಬಹುದು. 2028 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು.
ನಮ್ಮನೆಯಲ್ಲಿ ಇರುವವರೇ ನಮ್ಮನ್ನು ಬೈದರೆ, ಜನ ಎಲ್ಲಿ ಮತ ಹಾಕುತ್ತಾರೆ? ಕಾಂಗ್ರೆಸ್ ನ್ಯೂನತೆಗಳ ಬಗ್ಗೆ ನಾವೆಲ್ಲಾ ಹೋರಾಟ ಮಾಡಬೇಕಿದೆ. ಇನ್ನು ಮುಂದೆ ಪಕ್ಷದ ಬಗ್ಗೆ ಯಾರೇ ವಿರೋಧವಾಗಿ ಮಾತನಾಡಬೇಕು ಅಂದ್ರೆ, ಎಚ್ಚರವಾಗಿರಬೇಕು. ಹೈಕಮಾಂಡ್ ನ ನಿರ್ಧಾರ ವಿಜಯೇಂದ್ರಗೆ ಅಲ್ಲ, ಕರ್ನಾಟಕ ಬಿಜೆಪಿಗೆ ಶಕ್ತಿ ತುಂಬಿದಂತೆ. ಯತ್ನಾಳ್ ಉಚ್ಛಾಟನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎನ್ನುವುದು ಸುಳ್ಳು. ಯಾರೆ ಇರಲಿ, ಬಿಡಲಿ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ಹೇಳಿದ್ದಾರೆ.