ವಿಜಯಪುರ: ರಾಜ್ಯದಲ್ಲಿ ಹನಿಟ್ರ್ಯಾಪ್ ವಿಷಯ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಗೃಹ ಸಚಿವ ಜಿ.ಪರಮೇಶ್ವರ್‌ಗೆ (G Parameshwar) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಪತ್ರ ಬರೆದಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಬಯಲಾದ ಹನಿಟ್ರ‍್ಯಾಪ್ ವಿಚಾರ ಪ್ರಸ್ತಾಪಿಸಿ ಅವರು ಪತ್ರ ಬರೆದಿದ್ದಾರೆ. ಜನಪ್ರತಿನಿಧಿಗಳನ್ನು ಟಾರ್ಗೆಟ್ ಮಾಡಿ ಹನಿಟ್ರ‍್ಯಾಪ್ ಮಾಡಲಾಗುತ್ತಿದೆ. ಹೀಗಾಗಿ ಜನಪ್ರತಿನಿಧಿಗಳ ಭದ್ರತೆಯ ಅವಶ್ಯಕತೆ ಇದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವುದರ ಮೂಲಕ ಅದರ ಹಿಂದೆ ಇರುವ ಜಾಲವನ್ನು ಪತ್ತೆ ಮಾಡಬೇಕು. ಈ ಮೂಲಕ ನೀವು ಜನಪ್ರತಿನಿಧಿಗಳ ಘನತೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಯತ್ನಾಳ್ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಕೆ.ಎನ್ ರಾಜಣ್ಣ (KN Rajanna) ಮಾತನಾಡಿ, ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ, ಪೆನ್‌ಡ್ರೈವ್ ತಯಾರಾಗಿವೆ ಎಂದು ಬಾಂಬ್ ಸಿಡಿಸಿದ್ದರು.