ವಿಜಯಪುರ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ್ದರಿಂದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ.
ಹಲವು ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ್ದು, ಆಸ್ತಿಯು ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ತಿಳಿಸಿದೆ. ಹೊನವಾಡ ಗ್ರಾಮದ ಹಲವು ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದ್ದು, ಇದರಿಂದ ರೈತರು ಕಂಗೆಟ್ಟಿದ್ದಾರೆ ಎನ್ನಲಾಗಿದೆ. ವಿಜಯಪುರ ಒಂದೇ ಜಿಲ್ಲೆಯಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಎಕರೆ ಜಾಗವನ್ನು ವಕ್ಫ್ ತನ್ನ ಆಸ್ತಿ ಎಂದು ಹೇಳಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ನೋಟಿಸ್‌ನಲ್ಲಿ ರೈತರ ಜಮೀನು ವಕ್ಫ್ ಆಸ್ತಿಯಾಗಿದ್ದು, ಪಹಣಿ ಪತ್ರದಲ್ಲಿ ಕಾಲಂ ನಂ 11 ಹಾಗೂ 9ರಲ್ಲಿ ಉಲ್ಲೇಖಿಸಿ, 2 ದಿನದಲ್ಲಿ ತಕರಾರು ಸಲ್ಲಿಸಲು ಸೂಚಿಸಲಾಗಿದೆ. ಆದರೆ, ವಿಜಯಪುರ ಜಿಲ್ಲಾಧಿಕಾರಿ ಮಾತ್ರ ನೋಟಿಸ್ ಗೆ ಹೆದರುವ ಅವಶ್ಯಕತೆ ಲ್ಲ ಎಂದಿದ್ದಾರೆ. ಸಂಬಂಧಪಟ್ಟ ಕಚೇರಿಗೆ ಸೂಕ್ತ ದಾಖಲಾತಿ ನೀಡಿ ಎಂದಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ನಡೆಗೆ ಕಿಡಿಕಾರಿದ್ದಾರೆ. ಕೇಂದ್ರದಲ್ಲಿ ವಿವಾದಿತ ಕಾಯ್ದೆ ಮರುಪರಿಶೀಲನೆಗಾಗಿ ಜಂಟಿ ಸಂಸತ್ ಸಮಿತಿ ರಚನೆಯಾಗಿರುವಾಗ ತರಾತುರಿಯಲ್ಲಿ ಪಹಣಿ ಬದಲಿಸಿ ವಕ್ಫ್ ಬೋರ್ಡ್ ಹೆಸರು ನಮೂದಿಸಿರುವ ವಕ್ಫ್ ಈ ನಿರಂಕುಶ ನಡೆ ಖಂಡನೀಯ ಹಾಗೂ ಅಸಂವಿಧಾನಿಕ ಎಂದಿದ್ದಾರೆ.
ಅನ್ನದಾತನ ಜಮೀನನ್ನು ತಂದು ಹೇಳುವ ಹಕ್ಕು ವಕ್ಫ್ ಅವರಿಗಿಲ್ಲ. ಯಾವುದೋ ಒಂದು ಸಮುದಾಯದ ತುಷ್ಟೀಕರಣ ಮಾಡಲು ನಾಡಿನ ಅನ್ನದಾತರನ್ನು ಒಕ್ಕಲೆಬ್ಬಿಸಲು ಹೊರಟಿರುವ ಈ ಕ್ರಮ ಸರ್ಕಾರದ ಆದ್ಯತೆಗಳನ್ನು ತಿಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸದ್ದಾರೆ. ಸರ್ಕಾರ ಈ ನಿರ್ಣಯ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಈ ವಕ್ಫ್ ಪರವಿರುವ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದು ನಿಶ್ಚಿತ ಎಂದಿದ್ದಾರೆ.