ಬೆಂಗಳೂರು: ಬಿಜೆಪಿಯಲ್ಲಿ ಭಿನ್ನಮತ ಜೋರಾಗಿದ್ದು, ಆರೋಪ- ಪ್ರತ್ಯಾರೋಪ ಹೆಚ್ಚಾಗುತ್ತಿವೆ. ಬಣ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆಗೆ ಮುನಿಸಿಕೊಂಡಿರುವ ಶ್ರೀರಾಮುಲು ಅವರನ್ನು ಸೆಳೆಯಲು ಭಿನ್ನಮತೀಯ ತಂಡ ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.
ರೆಡ್ಡಿ-ರಾಮುಲು ಜಟಾಪಟಿ
ಸಂಡೂರು ಉಪ ಚುನಾವಣೆಯಲ್ಲಿ ಶ್ರೀರಾಮುಲು ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಎಂಬ ಆರೋಪ ಕೋರ್ ಕಮೀಟಿಯಲ್ಲಿ ವ್ಯಕ್ತವಾಗಿತ್ತು. ಅಲ್ಲದೇ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ನೇರವಾಗಿಯೇ ಈ ಆರೋಪ ಮಾಡಿ ರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ ಬಹಿರಂಗವಾಗಿಯೇ ನಾಯಕರ ವಿರುದ್ಧ ರಾಮುಲು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಜನಾರ್ಜನ ರೆಡ್ಡಿ ವಿರುದ್ಧ ಮುನಿಸಿಕೊಂಡು ಬಹಿರಂಗವಾಗಿ ಆರೋಪ ಮಾಡಿದ್ದರು.
ಇದು ದೊಡ್ಡ ವಿವಾದಕ್ಕೆ ಕರಾಣವಾಯಿತು. ರಾಮುಲು ಆರೋಪ ಮಾಡುತ್ತಿದ್ದಂತೆ, ಗಾಲಿ ಜನಾರ್ದನ ರೆಡ್ಡಿ ಕೂಡ ಸುದ್ದಿಗೋಷ್ಠಿ ನಡೆಸಿ ರಾಮುಲು ವಿರುದ್ಧ ಕಿಡಿಕಾರಿದ್ದರು. ಈ ಮಧ್ಯೆ ಶ್ರೀರಾಮುಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಕಾಂಗ್ರೆಸ್ ನಾಯಕರು ಸೆಳೆಯುವ ಕೆಲಸ ಮಾಡಿದರು. ಇದರ ಮಧ್ಯೆಯೇ ಬಿಜೆಪಿಯಲ್ಲಿನ ಮತ್ತೊಂದು ರೆಬೆಲ್ ಬಣ ಶ್ರೀರಾಮುಲು ಅವರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿದೆ ಎನ್ನಲಾಗಿದೆ. ಇದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ರಾಮುಲುಗೆ ಆಫರ್?
ಈಗಾಗಲೇ ಬಿಜೆಪಿ ಭಿನ್ನರ ಗುಂಪು ಶ್ರೀರಾಮುಲು ಅವರನ್ನು ಸಂಪರ್ಕ ಮಾಡಿದೆ. ಅಲ್ಲದೆ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಆಫರ್ ಕೂಡ ನೀಡಿದೆ ಎಂದು ತಿಳಿದು ಬಂದಿದೆ. ಆದರೆ, ಬಿಜೆಪಿ ಎರಡು ಬಣದಲ್ಲೂ ಶ್ರೀರಾಮುಲು ಗುರುತಿಸಿಕೊಂಡಿಲ್ಲ. ಬದಲಾಗಿ ತಟಸ್ಥವಾಗಿ ಉಳಿದುಕೊಳ್ಳಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿನ ಈ ಆಂತರಿಕ ಕಿತ್ತಾಟ ಈಗ ಹಾದಿ ಬೀದಿ ರಂಪವಾಗಿದ್ದು, ಹೈಕಮಾಂಡ್ ಮಾತ್ರ ಇದುವರೆಗೂ ಮಧ್ಯ ಪ್ರವೇಶಿಸಿ ಗುಂಪುಗಾರಿಕೆ ಶಮನ ಮಾಡುವ ಯತ್ನ ಮಾಡುತ್ತಿಲ್ಲ.