ಮಂಗಳೂರು | ಯತೀಂದ್ರ ಅವರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಮುಗೀತು. ಈ ಬಗ್ಗೆ ನನಗೆ ಪ್ರತಿಕ್ರಿಯಿಸಲು ಇಷ್ಟವಿಲ್ಲ. ಏನು ಪ್ರತಿಕ್ರಿಯಿಸಬೇಕೋ ಅದನ್ನು ದೆಹಲಿಯಲ್ಲಿ ಪ್ರತಿಕ್ರಿಯಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ, ನಾಯಕತ್ವ ಬದಲಾವಣೆ ಮಾಡಲ್ಲ ಎಂದು ಹೈಕಮಾಂಡ್ ಸಿಗ್ನಲ್ ಕೊಟ್ಟಿದೆ ಎಂಬ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಪ್ರತಿಕ್ರಿಯಿಸಿದ ಡಿಕೆಶಿ, ಯತೀಂದ್ರರ ಈ ಹೇಳಿಕೆಯನ್ನು ಗೌರವದಿಂದ ಸ್ವೀಕರಿಸುತ್ತೇನೆ. ಈ ಬಗ್ಗೆ ಏನು ಪ್ರತಿಕ್ರಿಯಿಸಬೇಕೋ ಅದನ್ನು ದೆಹಲಿಯಲ್ಲಿ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ್ದಾರೆ.
ಪುತ್ತೂರು ಕಾಂಗ್ರೆಸ್ ಕಚೇರಿ ಶಿಲಾನ್ಯಾಸದಲ್ಲಿ ಮುಸ್ಲಿಂ ಮುಖಂಡರ ಹೆಸರು ಕೈಬಿಟ್ಟ ವಿಚಾರವಾಗಿ ಉತ್ತರಿಸಿದ ಡಿಕೆಶಿ, ಕಾಂಗ್ರೆಸ್ ಜಾತಿ ಮೇಲಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲಾ ಜಾತಿ, ಧರ್ಮಗಳೂ ಬೇಕು. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅಸೂಯೆ ಇರುವವರು ಈ ರೀತಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಮೈಸೂರಲ್ಲಿ ಯತೀಂದ್ರ ಹೇಳಿದ್ದೇನು?
ಸಿಎಂ ಬದಲಾವಣೆ ವಿಚಾರದ ಬಗ್ಗೆ ಮೈಸೂರಲ್ಲಿಂದು ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಬಗ್ಗೆ ರಾಜಕೀಯ ವಲಯದಲ್ಲಿ ಯಾವುದೇ ಚರ್ಚೆ ಆಗುತ್ತಿಲ್ಲ. ಕೇವಲ ಮಾಧ್ಯಮದಲ್ಲಿ ಮಾತ್ರ ಚರ್ಚೆ ಆಗುತ್ತಿದೆ. ಸಿಎಂ ಬದಲಾವಣೆ ವಿಚಾರ ಈಗಾಗಲೇ ಸೆಟ್ಲ್ ಆಗಿದೆ. ಸಿಎಂ ಅವರನ್ನು ಕೆಳಗಿಳಿಸಿ ಎಂದು ಯಾರೂ ಹೇಳಿಲ್ಲ. ಜತೆಗೆ ಕೆಲವರ ಬೇಡಿಕೆಗೂ ಹೈಕಮಾಂಡ್ ಯಾವುದೇ ಮನ್ನಣೆ ಕೊಟ್ಟಿಲ್ಲ. ಹೈಕಮಾಂಡ್ ನೇರವಾಗಿ ಹೇಳದೇ ಇರಬಹುದು, ಆದರೆ ಸದ್ಯಕ್ಕೆ ನಾಯಕತ್ವದಲ್ಲಿ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟವಾಗಿ ಸಿಗ್ನಲ್ ಕೊಟ್ಟಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೋಲಾರ | ಹೆಲಿಕಾಪ್ಟರ್‌ನಲ್ಲಿ ಬಂದ ಸಚಿವ ಭೈರತಿ ಸುರೇಶ್ ನೋಡಲು ಮುಗಿಬಿದ್ದ ಜನ



















