ತುಮಕೂರು: ಬಡವರಿಗೆ ಸಹಾಯಕವಾಗಿದ್ದ ಯಶಸ್ವಿನಿ ಯೋಜನೆ ಮತ್ತೆ ಆರಂಭವಾಗಲಿದೆ ಎನ್ನಲಾಗುತ್ತಿದ್ದು, ರಾಜ್ಯದಲ್ಲಿ ಸಂತಸ ಮನೆ ಮಾಡಿದೆ. ಆರೋಗ್ಯ ಸಂಜೀವಿನಿಯಾಗಿದ್ದ `ಯಶಸ್ವಿನಿ ಯೋಜನೆ’ ಮತ್ತೆ ಪ್ರಾರಂಭಿಸುವ ಕುರಿತು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಸುಳಿವು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಣ್ಣ, ಯಶಸ್ವಿನಿ ಯೋಜನೆಯನ್ನು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿತ್ತು. ಆನಂತರ ಆ ಯೋಜನೆ ಸ್ಥಗಿತವಾಗಿತ್ತು. ಆದರೆ, ಯಡಿಯೂರಪ್ಪ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೂ ಜಾರಿಯಾಗಿರಲಿಲ್ಲ. ಈಗ ಸಿಎಂ ಸಿದ್ದರಾಮಯ್ಯ ಅವರ ಸಹಕಾರದಿಂದ ಮತ್ತೆ ಆರಂಭಿಸುತ್ತಿದ್ದೇವೆ. ರೈತರ ಅನುಕೂಲಕ್ಕಾಗಿ ಈ ಯೋಜನೆ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.
ಹಾಲಿನ ದರದ ಕುರಿತು ಕೂಡ ಅವರು ಮಾತನಾಡಿದ್ದಾರೆ. ನಾವು ಹಾಲಿನ ದರ ಹೆಚ್ಚಳ ಮಾಡಿದರೂ ಅದನ್ನು ರೈತರಿಗೆ ಮರಳಿ ನೀಡುತ್ತೇವೆ. ಈ ಮೂಲಕ ರೈತರಿಗೆ ಆಸರೆಯಾಗುವ ಕಾರ್ಯ ಮಾಡುತ್ತಿದ್ದೇವೆ. ದೇಶದಲ್ಲೇ ನಮ್ಮಷ್ಟು ಕಡಿಮೆ ದರದಲ್ಲಿ ರೈತರಿಂದ ಹಾಲು ಸಂಗ್ರಹ ಮಾಡುವ ಯಾವುದೇ ರಾಜ್ಯವಿಲ್ಲ. ಅಲ್ಲದೇ, ಕಡಿಮೆ ದರದಲ್ಲಿ ಗ್ರಾಹಕರಿಗೆ ಹಾಲು ಕೊಡುತ್ತಿರುವ ರಾಜ್ಯ ಕೂಡ ನಮ್ಮದೇ.
ಸದ್ಯ ರಾಜ್ಯದಲ್ಲಿ 31 ರೂಪಾಯಿಗೆ ಹಾಲು ಖರೀದಿಸಿ, 42 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಕೆಲವು ರಾಜ್ಯಗಳು 60 ರೂ. ವರೆಗೂ ಹಾಲು ಮಾರಾಟ ಮಾಡುತ್ತಿವೆ. ಹೀಗೆ ಹಾಲಿನ ದರ ಹೆಚ್ಚಳವಾದರೆ ಅದು ರೈತರ ಖಾತೆಗೆ ಜಮೆಯಾಗುತ್ತದೆ. 5 ರೂ. ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಹೆಚ್ಚಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.