ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ದಿನದಾಟದಲ್ಲಿ ಭಾರತದ ಆರಂಭಿಕ ಆಟಗಾರರು ಬೇಗ ಬೇಗನೆ ಔಟ್ ಆಗಿ ಆಘಾತ ಮೂಡಿಸಿದ್ದರು. ಆದರೂ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಯಶಸ್ವಿ ಜೈಸ್ವಾಲ್ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಇತಿಹಾಸ ಬರೆದಿದ್ದಾರೆ.
ತಮ್ಮ ಇನ್ನಿಂಗ್ಸ್ ನಲ್ಲಿ 118 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 56 ರನ್ ಗಳ ಮಹತ್ವದ ಇನ್ನಿಂಗ್ಸ್ ಕಟ್ಟಿದರು. ಈ ಇನ್ನಿಂಗ್ಸ್ ಮೂಲಕ ಅವರು ಕಳೆದ 147 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 56 ರನ್ ಗಳ ಇನ್ನಿಂಗ್ಸ್ ಆಡಿದ ಜೈಸ್ವಾಲ್, 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಅದರಲ್ಲೂ ತವರು ನೆಲದಲ್ಲಿ ತಮ್ಮ ಮೊದಲ 10 ಇನ್ನಿಂಗ್ಸ್ ಗಳಲ್ಲಿ 750 ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ವೆಸ್ಟ್ ಇಂಡೀಸ್‌ನ ಜಾರ್ಜ್ ಹ್ಯಾಡ್ಲಿ ಹೆಸರಿನಲ್ಲಿ ಈ ದಾಖಲೆ ಇತ್ತು. ಅವರು 1935 ರಲ್ಲಿ 747 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದರು.
ಅಲ್ಲದೇ, ಯಶಸ್ವಿ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಈ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಜೈಸ್ವಾಲ್ ಆಡಿರುವ 10 ಪಂದ್ಯಗಳ 17 ಇನ್ನಿಂಗ್ಸ್‌ಗಳಲ್ಲಿ 67.75 ಸರಾಸರಿಯಲ್ಲಿ 1084 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ನ ಜೋ ರೂಟ್, ಈ ಆವೃತ್ತಿಯಲ್ಲಿ ಆಡಿರುವ 16 ಪಂದ್ಯಗಳಲ್ಲಿ 53.76 ಸರಾಸರಿಯಲ್ಲಿ 1,398 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ನ ಮತ್ತೊಬ್ಬ ಬ್ಯಾಟ್ ಬೆನ್ ಡಕೆಟ್ 1028 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಅಲ್ಲದೇ, ಜೈಸ್ವಾಲ್ 10 ಟೆಸ್ಟ್ ಪಂದ್ಯಗಳಲ್ಲಿ ಅಧಿಕ ಬಾರಿ ಅರ್ಧ ಶತಕ ಗಳಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಸದಾಗೋಪನ್ ರಮೇಶ್ ಈ ಸಾಧನೆ ಮಾಡಿದ್ದು, ಜೈಸ್ವಾಲ್ ಅವರನ್ನು ಸರಿಗಟ್ಟಿದ್ದಾರೆ. 10 ಟೆಸ್ಟ್ ಗಳಲ್ಲಿ ಸುನಿಲ್ ಗವಾಸ್ಕರ್ ಅವರು 9 ಬಾರಿ ಅರ್ಧ ಶತಕ ಗಳಿಸಿದ್ದರು. ಒಂದು ವೇಳೆ ಜೈಸ್ವಾಲ್ ಈ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿಯೂ ಅರ್ಧ ಶತಕ ಗಳಿಸಿದರೆ ಗವಾಸ್ಕರ್ ದಾಖಲೆ ಸರಿಗಟ್ಟಲಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಕೇವಲ 17 ಟೆಸ್ಟ್ ಆಡಿರುವ ಜೈಸ್ವಾಲ್ 3 ಶತಕ ಮತ್ತು 5 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಪೈಕಿ ಎರಡು ದ್ವಿಶತಕಗಳಿವೆ. 67.75 ಸರಾಸರಿಯಲ್ಲಿ 1084 ರನ್ ಗಳಿಸಿದ್ದಾರೆ.