ಸಿಂಗಾಪುರ: ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಯಾದ ಕೆನಾಲಿಸ್‌ನ ಇತ್ತೀಚಿನ ವರದಿಯ ಪ್ರಕಾರ, ಚೀನಾದ ಟೆಕ್ ದೈತ್ಯ ಶಿಯೋಮಿ, 2025ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಆಪಲ್ ಕಂಪನಿಯನ್ನು ಹಿಂದಿಕ್ಕಿ, ಜಾಗತಿಕ ವಿಯರೇಬಲ್ (ಧರಿಸಬಹುದಾದ ಸಾಧನ) ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಶಿಯೋಮಿಯ ನವೀಕೃತ Mi Band ಮತ್ತು Redmi Watch ಮಾದರಿಗಳ ಯಶಸ್ಸು ಈ ಗಮನಾರ್ಹ ಸಾಧನೆಯ ಹಿಂದಿನ ಪ್ರಮುಖ ಕಾರಣವೆಂದು ವರದಿ ಹೇಳಿದೆ.
ಕೆನಾಲಿಸ್‌ನ ‘ವೇರಿಯೇಬಲ್ ಬ್ಯಾಂಡ್ ಅನಾಲಿಸಿಸ್’ ವರದಿಯು ಪ್ರಕಾರ, 2025ರ ಮೊದಲ ತ್ರೈಮಾಸಿಕದಲ್ಲಿ ವಿಶ್ವಾದ್ಯಂತ ಒಟ್ಟು 46.6 ಮಿಲಿಯನ್ ವಿಯರೇಬಲ್ ಡಿವೈಸ್ಗಳು ರವಾನೆಯಾಗಿದ್ದು, ಇದು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 13ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ತಿಳಿಸಿದೆ. ಈ ಬೆಳವಣಿಗೆಗೆ ಬೇಸಿಕ್ ವಿಯರೇಬಲ್ಗಳ ಕೊಡುಗೆ ಹೆಚ್ಚಿದೆ. .
ಶಿಯೋಮಿಯ ಯಶಸ್ಸಿಗೆ ಅದರ ನೂತನ Xiaomi Smart Band 9 ಮತ್ತು Redmi Band 5 ಮಾದರಿಗಳ ಬಿಡುಗಡೆ ಹಾಗೂ ಕಂಪನಿಯ HyperOS ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿವೆ. HyperOS, ಶಿಯೋಮಿಯ ಸ್ಮಾರ್ಟ್‌ಫೋನ್‌ಗಳು, ವೇರಿಯೇಬಲ್‌ಗಳು ಮತ್ತು ಸ್ಮಾರ್ಟ್ ಹೋಮ್ ಉತ್ಪನ್ನಗಳ ನಡುವೆ ಸುಗಮ ಸಂಪರ್ಕ ಕಲ್ಪಿಸುತ್ತದೆ. ಈ ತ್ರೈಮಾಸಿಕದಲ್ಲಿ ಶಿಯೋಮಿಯ ವಿಯರೇಬಲ್ ಮಾರಾಟವು ಶೇಕಡಾ 44ರಷ್ಟು ಏರಿಕೆ ಕಂಡು, 8.7 ಮಿಲಿಯನ್ ಯೂನಿಟ್‌ಗಳನ್ನು ತಲುಪಿವೆ.
ಇದನ್ನೂ ಓದಿ: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್‌ಗೆ ಎಂಜಿ ವಿಂಡ್ಸರ್ ಕೊಡುಗೆ
ಇದೇ ಅವಧಿಯಲ್ಲಿ, ಆಪಲ್ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಶೇಕಡಾ 16ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಆಪಲ್‌ನ ವಿಯರೇಬಲ್ ಮಾರುಕಟ್ಟೆ ತಂತ್ರವು ಸದ್ಯಕ್ಕೆ “ನಿಶ್ಚಲ”ವಾಗಿದೆ ಎಂದು ಕೆನಾಲಿಸ್ ವಿಶ್ಲೇಷಿಸಿದೆ. ಆದಾಗ್ಯೂ, 2025ರ ದ್ವಿತೀಯಾರ್ಧದಲ್ಲಿ ಆಪಲ್ ತನ್ನ 10ನೇ ವಾರ್ಷಿಕೋತ್ಸವದ ವಿಶೇಷ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಇದು ಮಾರುಕಟ್ಟೆಯಲ್ಲಿ ಅದರ ಸ್ಥಾನ ಮರುಕಳಿಸಲು ಸಹಕಾರಿಯಾಗಬಹುದು.
ಇತರ ಪ್ರಮುಖ ಕಂಪನಿಗಳ ಪೈಕಿ, ಹುವಾವೆ ಮೂರನೇ ಸ್ಥಾನದಲ್ಲಿದ್ದರೆ, ಸ್ಯಾಮ್‌ಸಂಗ್ ನಾಲ್ಕನೇ ಮತ್ತು ಗಾರ್ಮಿನ್ ಐದನೇ ಸ್ಥಾನದಲ್ಲಿವೆ. ಹುವಾವೆ ಚೀನಾದ ಸ್ಥಳೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ.
ವರದಿಯಲ್ಲಿ ಇನ್ನೇನಿದೆ?
ಕೆನಾಲಿಸ್‌ನ ಯುರೋಪಿಯನ್ ಗ್ರಾಹಕರ ಸಮೀಕ್ಷೆಯು, ಸ್ಮಾರ್ಟ್‌ವಾಚ್ ಖರೀದಿಸುವಾಗ ಗ್ರಾಹಕರು ಕೈಗೆಟುಕುವ ಬೆಲೆ, ದೀರ್ಘ ಬಾಳಿಕೆಯ ಬ್ಯಾಟರಿ, ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳು, ಬ್ರ್ಯಾಂಡ್ ಹೆಸರು ಮತ್ತು ಆಕರ್ಷಕ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಬಹಿರಂಗಪಡಿಸಿದೆ.
ಭವಿಷ್ಯದಲ್ಲಿ ವಿಯರೇಬಲ್ ಮಾರುಕಟ್ಟೆಯಲ್ಲಿನ ಸ್ಪರ್ಧೆಯು ಉತ್ಪನ್ನಗಳ ಇಕೋಸಿಸ್ಟಮ್ ಮತ್ತು ಆಫ್ಟರ್ ಸೇಲ್ ಸೇವೆಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಎಂದು ವರದಿ ಮುನ್ಸೂಚನೆ ನೀಡಿದೆ. ಆಪಲ್‌ನಂತಹ ಕಂಪನಿಗಳು ತಮ್ಮ ಮಾರುಕಟ್ಟೆ ಪಾಲನ್ನು ಉಳಿಸಿಕೊಳ್ಳಲು ಕ್ಯಾಮೆರಾ ಅಳವಡಿಕೆಯಂತಹ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಕೆನಾಲಿಸ್ ಅಭಿಪ್ರಾಯಪಟ್ಟಿದೆ.