ಬೆಂಗಳೂರು: ಸರ್ಕಾರದ ‘ಟೇಕ್‌ಡೌನ್’ (ಆಕ್ಷೇಪಾರ್ಹ ಖಾತೆ/ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ನೀಡುವ ಸೂಚನೆ) ನೋಟಿಸ್‌ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸಾಮಾಜಿಕ ಮಾಧ್ಯಮ ದೈತ್ಯ ‘ಎಕ್ಸ್’ (ಟ್ವಿಟರ್) ಸೋಮವಾರ ಪ್ರಕಟಿಸಿದೆ. ಈ ಆದೇಶವು ‘ತೀವ್ರ ಕಳವಳಕಾರಿ’ಯಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ ಎಂದು ಕಂಪನಿ ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ‘ಎಕ್ಸ್’, “ಕರ್ನಾಟಕ ಉಚ್ಚ ನ್ಯಾಯಾಲಯದ ಇತ್ತೀಚಿನ ಆದೇಶದಿಂದ ನಮಗೆ ತೀವ್ರ ಕಳವಳವಾಗಿದೆ. ಈ ಆದೇಶವು ಲಕ್ಷಾಂತರ ಪೊಲೀಸ್ ಅಧಿಕಾರಿಗಳಿಗೆ ಮನಬಂದಂತೆ (ಸ್ವಇಚ್ಛಾನುಸಾರ) ಟೇಕ್‌ಡೌನ್ ಆದೇಶಗಳನ್ನು ನೀಡಲು ಅನುವು ಮಾಡಿಕೊಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ನಾವು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ತಿಳಿಸಿದೆ.
ಹೈಕೋರ್ಟ್ ಹೇಳಿದ್ದೇನು?
ಈ ಹಿಂದೆ, ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪ್ರಶ್ನಿಸಿ ‘ಎಕ್ಸ್’ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ವಿಚಾರಣೆ ವೇಳೆ, ನ್ಯಾಯಾಲಯವು ಈ ಕೆಳಗಿನ ಪ್ರಮುಖ ಅಂಶಗಳನ್ನು ಒತ್ತಿ ಹೇಳಿತ್ತು:
ಸಾಮಾಜಿಕ ಮಾಧ್ಯಮಗಳ ನಿಯಂತ್ರಣವು ‘ಈ ಹೊತ್ತಿನ ಅಗತ್ಯ’ವಾಗಿದೆ. ಭಾರತದಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಕಾರ್ಯನಿರ್ವಹಿಸಲು ಮೈಕ್ರೋಬ್ಲಾಗಿಂಗ್ ವೇದಿಕೆಗಳಿಗೆ ಅನುಮತಿಸಲಾಗುವುದಿಲ್ಲ.
ಭಾರತದಲ್ಲಿ ಕಾರ್ಯನಿರ್ವಹಿಸಲು ಬಯಸುವ ಪ್ರತಿಯೊಂದು ಕಂಪನಿಯು ದೇಶದ ಕಾನೂನುಗಳನ್ನು ಪಾಲಿಸಬೇಕು.
ಸಂವಿಧಾನದ 19ನೇ ವಿಧಿಯ ಅಡಿಯಲ್ಲಿನ ವಾಕ್ ಸ್ವಾತಂತ್ರ್ಯದ ರಕ್ಷಣೆ ಕೇವಲ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯ, ‘ಎಕ್ಸ್’ ನಂತಹ ವಿದೇಶಿ ಸಂಸ್ಥೆಗಳಿಗಲ್ಲ.
ಅಮೆರಿಕದ ಕಾನೂನುಗಳನ್ನು ಪಾಲಿಸುವಾಗ ಭಾರತದ ಆದೇಶಗಳನ್ನು ಪಾಲಿಸಲು ನಿರಾಕರಿಸುವುದನ್ನು ಟೀಕಿಸಿದ್ದ ನ್ಯಾಯಪೀಠ, “ಅಮೆರಿಕದ ನ್ಯಾಯಶಾಸ್ತ್ರವನ್ನು ಭಾರತದ ನ್ಯಾಯಾಂಗದ ಚಿಂತನಾ ಪ್ರಕ್ರಿಯೆಗೆ ತರಲು ಸಾಧ್ಯವಿಲ್ಲ” ಎಂದು ಖಾರವಾಗಿ ನುಡಿದಿತ್ತು.
“ಭಾರತೀಯ ಮಾರುಕಟ್ಟೆಯನ್ನು ಆಟದ ಮೈದಾನವೆಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ, ದೇಶದ ಕಾನೂನುಗಳಿಗೆ ಎಲ್ಲಾ ವೇದಿಕೆಗಳೂ ಬದ್ಧವಾಗಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.