ಬೆಂಗಳೂರು: ಎಲಾನ್ ಮಸ್ಕ್ ಒಡೆತನದ ಎಕ್ಸ್ ಸಂಸ್ಥೆ ಭಾರತ ಸರ್ಕಾರ ವಿರುದ್ಧ ಕಾನೂನು ಮೊಕದ್ದಮೆ (Lawsuit) ಹೂಡಿದೆ ಎನ್ನಲಾಗಿದೆ.
ಕಾನೂನು ಪರಾಮರ್ಶೆ ಇಲ್ಲದೇ ಕಂಟೆಂಟ್ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಎಕ್ಸ್ (X social media platform) ಸಂಸ್ಥೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಸರ್ಕಾರವು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯನ್ನು, ಅದರಲ್ಲೂ ಹೆಚ್ಚಾಗಿ ಸೆಕ್ಷನ್ 79(3)(ಬಿ) ಅನ್ನು ತಪ್ಪಾಗಿ ಅರ್ಥೈಸುತ್ತಿದೆ ಎಂದು ಎಕ್ಸ್ ಆರೋಪಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎನಲ್ಲಿ ಕಂಟೆಂಟ್ ಬ್ಲಾಕ್ ಮಾಡಲು ಕಾನೂನು ಪ್ರಕ್ರಿಯೆ ನಿರ್ದಿಷ್ಟ ಪಡಿಸಲಾಗಿದೆ. ಆದರೆ, ಸರ್ಕಾರವು 79(3)(ಬಿ) ಅನ್ನು ಬಳಸಿ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಕಂಟೆಂಟ್ ಅಥವಾ ಪೋಸ್ಟ್ಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತಿದೆ ಎಂದು ಅದು ಆರೋಪಿಸಿ ಮೊಕದ್ದಮೆ ದಾಖಲಿಸಿದೆ.
ಕಾನೂನನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಕಾನೂನು ಸರ್ಕಾರಕ್ಕೆ ಕಂಟೆಂಟ್ ನಿರ್ಬಂಧಿಸಲು ಸ್ವತಂತ್ರ ಅಧಿಕಾರ ನೀಡುವುದಿಲ್ಲ. ಒಂದು ಕಂಟೆಂಟ್ ನಿರ್ಬಂಧಿಸಲು ಅಥವಾ ಬ್ಲಾಕ್ ಮಾಡಲು ಸರಿಯಾದ ಸಾಕ್ಷ್ಯಾಧಾರ ಒದಗಿಸುವುದು ಇತ್ಯಾದಿ ಕಾನೂನು ಮಾರ್ಗಗಳನ್ನು ಸರ್ಕಾರ ಅನುಸರಿಸಬೇಕು. ಅದು ಬಿಟ್ಟು ಏಕಪಕ್ಷೀಯವಾಗಿ ಕಂಟೆಂಟ್ ತೆಗೆಯಲು ಮುಂದಾಗುವುದು ತಪ್ಪು ಎಂದು ಎಕ್ಸ್ ವಾದಿಸಿದೆ.